ಪತ್ರಿಕೋದ್ಯಮ ಒಂದು ನ್ಯಾಯಾಲಯದಂತೆ ವರ್ತಿಸಬೇಕು. ಪತ್ರಕರ್ತರಾದವರು ನ್ಯಾಯಾಧೀಶರಾಗಿ ವರ್ತಿಸಬೇಕು. ಆದರೆ ಕನ್ನಡದ ಖ್ಯಾತ ಪತ್ರಕರ್ತರೆನ್ನಿಸಿಕೊಂಡ ಕೆಲವರು ಮಾಡುತ್ತಿರುವುದೇ ಬೇರೆ. ಹೀಗಾಗಿ ಯಾರನ್ನೂ ನಂಬುವಂತಿಲ್ಲ.
ಕನ್ನಡಪ್ರಭದ ಅಂಕಣಕಾರ ಪ್ರತಾಪ್‌ಸಿಂಹ ಕೂಡಾ ಇದೇ ಸಾಲಿಗೆ ಸೇರ್ಪಡೆಯಾಗಿರುವುದು ದುರಂತ. ಇವರು ಬಾಯಿ ಬಿಟ್ಟರೆ ಹಿಂದು-ಹಿಂದುತ್ವ ಎಂದು ಬಡಬಡಿಸುತ್ತಾರೆ. ಆದರೆ ಹಿಂದು ಮೇಲ್ವರ್ಗದವರ ಉಡಾಳತನದ ಬಗ್ಗೆ ಎಂದೂ ಅಂಕಣ ಬರೆಯುವುದಿಲ್ಲ. ಇಂದಿನ ತಮ್ಮ "ಬೆತ್ತಲೆ ಪ್ರಪಂಚ"ದಲ್ಲಿ ದೆಹಲಿಯಲ್ಲಿ ನಡೆದ ಅತ್ಯಾಚಾರದ ವಿಷಯ ಎತ್ತಿಕೊಂಡು ಕೇಂದ್ರದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರವನ್ನು ಟೀಕಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ, ಆದರೆ ಅದರ ಹಿಂದಿರುವ ಉದ್ದೇಶ, ಒಂದು ಕಣ್ಣಿಗೆ ಬೆಣ್ಣೆ-ಒಂದು ಕಣ್ಣಿಗೆ ಸುಣ್ಣ ಎನ್ನುವಂತಹ ಇವರ ಮನೋಭಾವ ಖಂಡನೀಯ. ಇವರ ಲೇಖನದಲ್ಲಿ ಎಲ್ಲೂ ಆ ಅತ್ಯಾಚಾರವನ್ನು ಖಂಡಿಸುವ ಒಂದೇ ಒಂದು ಪದವಿಲ್ಲ! ಬದಲಿಗೆ ಇವರು ಖಂಡಿಸುವುದು ಕೇವಲ ಎಬಿವಿಪಿ ಹೋರಾಟಗರರನ್ನು ಕೇಂದ್ರವು ಸರಿಯಾಗಿ ನಡೆಸಿಕೊಳ್ಳದಿರುವುದನ್ನು ಮಾತ್ರ ! ಆದರೆ ಅದೇ ಹೋರಾಟಗಾರರ ಹೊಡೆತಕ್ಕೆ ಸಿಕ್ಕು ಸತ್ತ ಪೊಲೀಸ್ ಪೇದೆ ಇವರಿಗೆ ಲೆಕ್ಕಕ್ಕಿಲ್ಲ!
"ಡೆಲ್ಲಿಯಲ್ಲಿ ಇಬ್ಬರೇ ಸೇಫ್! ಸೋನಿಯ ಮತ್ತು ಶೀಲಾ" ಎನ್ನುವ ಇವರಿಗೆ ಕರ್ನಾಟಕದಲ್ಲಿ ಎಲ್ಲಾ ಹುಡುಗಿಯರೂ ಸೇಫ್ ಅನ್ನಿಸಿರಬೇಕು. ಕರ್ನಾಟಕದಲ್ಲಿ ಅತ್ಯಾಚಾರಗಳೇ ನಡೆದಿಲ್ಲವೇ ಪ್ರತಾಪ್ ಅವರೇ ? ಕರ್ನಾಟಕವೇನು ನಿಮ್ಮ RSS ಕೃಪಾಪೋಷಿತ ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಮರಾಜ್ಯವಾಗಿ ಹೋಗಿದೆ ಅಂದುಕೊಂಡಿದ್ದೀರಾ ? ಡೆಲ್ಲಿಯಲ್ಲಿ ಆ ಹುಡುಗಿಯ ಅಮಾನುಷ ಅತ್ಯಾಚಾರ ನಡೆದುದು ಡಿಸೆಂಬರ‍್ ೧೬ ರಂದು. ಅಲ್ಲಿಂದ ಇಂದಿನವರೆಗಿನ ೧೨ ದಿನಗಳ ಅವಧಿಯಲ್ಲೇ ಕರ್ನಾಟಕದಲ್ಲಿ ಆರೇಳು ಅತ್ಯಾಚಾರ ಪ್ರಕರಣಗಳು ಇವರದೇ ಕನ್ನಡಪ್ರಭದಲ್ಲಿ ವರದಿಯಾಗಿದೆ. ಅದರಲ್ಲು ಮಂಗಳೂರಿನಲ್ಲಿ ಡಿ. ೧೮ಕ್ಕೆ ನಡೆದ ಒಂದಂತೂ ದೆಹಲಿಯಲ್ಲಿ ನಡೆದಂತಹುದೇ ಘಟನೆ. ಒಬ್ಬ ಯುವತಿಯನ್ನು ತಲಾ ನಾಲ್ಕು ಜನರ ತಂಡ ಎರಡು ಬಾರಿ ಅತ್ಯಾಚಾರವೆಸಗಿರುವುದಾಗಿ ವರದಿಯಾಗಿದೆ. ಅದೇನೂ ಅಮಾನವೀಯವಲ್ಲವೇ ? ಕೆಲವೆ ದಿನಗಳ ಕೆಳಗೆ ಧರ್ಮಸ್ಥಳದ ಸ್ನಾನಘಟ್ಟದ ಬಲಿ ಸೌಜನ್ಯ ಎಂಬ ಯುವತಿಯನ್ನು ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಎಸೆಯಲಾಗಿತ್ತು. ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ತಿಂಗಳಿಗೆ ಒಂದೆರಡಾದರೂ ಅತ್ಯಾಚಾರಗಳು ನಡೆಯುತ್ತವೆ. ಇಂತಹ ಅನೇಕ ಘಟನೆಗಳು ಯಾಕೆ ಪ್ರತಾಪ್‌ಸಿಂಹರಿಗಾಗಲೀ, ಎಬಿವಿಪಿಗಳಿಗಾಗಲಿ ಕಾಣಿಸಲಿಲ್ಲ ? ಇವರೇಕೆ ಅಂಕಣ ಬರೆಯಲಿಲ್ಲ ? ಅವರೇಕೆ ಚಕಾರ ವೆತ್ತಲಿಲ್ಲ ? ಕಾಂಗ್ರೆಸ್ ಇದ್ದರೆ ಅಂಕಣ ಹೋರಾಟ, ಬಿಜೆಪಿ ಇದ್ದರೆ ಎಲ್ಲಾ ಮುಗುಂ !!?
ಇಷ್ಟಕ್ಕು ಬೆಂಗಳೂರು ಎಷ್ಟರ ಮಟ್ಟಿಗೆ ಸೇಫ್ ? ದೇಶದಲ್ಲಿ ಅತ್ಯಾಚಾರದಲ್ಲಿ ಬೆಂಗಳೂರು ನಾಲ್ಕನೇ ಸ್ಥಾನ ಪಡೆದಿದೆ. ಇದೇನು ಕಡಿಮೆ ಸಾಧನೆ(?!)ಯೇ ? ದೆಹಲಿ ಸೇರಿದಂತೆ ಮೆಟ್ರೋ ನಗರಗಳಲ್ಲೆಲ್ಲಾ ಅತ್ಯಾಚಾರ ಎಗ್ಗಿಲ್ಲದೇ ನಡೆಯುತ್ತಲೇ ಇದೆ. ಆದರೂ ಇವರ ಹೋರಾಟ, ಅಂಕಣಗಳು ಮಾತ್ರ ಯಾಕೆ ದೆಹಲಿಗೇ ಸೀಮಿತವಾಗಿವೆ ? ದೆಹಲಿ ಹುಡುಗಿಯರು ಮಾತ್ರ ಶೀಲವಂತರು, ಉಳಿದ ಹುಡುಗಿಯರು ಶೀಲವಂತರಲ್ಲವೇ ? ಅದಿರಲಿ ಕಳೆದ ಹತ್ತು ವರ್ಷದಿಂದ ಮೋದಿಯವರ ಆಡಳಿತವಿರುವ ಗುಜರಾಥ್‌ನಲ್ಲಿ ಅತ್ಯಾಚಾರಗಳೇ ನಡೆಯತ್ತಿಲ್ಲವೇ ? ನನಗೆ ದೊರೆತ ಮಾಹಿತಿ ಪ್ರಕಾರ ೨೦೧೧ ರಲ್ಲಿ ಗುಜರಾಥ್‌ನಲ್ಲಿ ಒಟ್ಟು ೪೦೮ ಅತ್ಯಾಚಾರ ಪ್ರಕರಣಗಳು ನಡೆದಿವೆ ಹಾಗೂ ಇವುಗಳಲ್ಲಿ ಅಹ್ಮದಾಬಾದ್‌ನಿಂದಲೇ ೬೦ ವರದಿಯಾಗಿವೆ. ಇದೇನೂ ಆತಂಕಕರಿ ವಿಷಯವಲ್ಲವೇ ?
ನಿಜ, ಅತ್ಯಾಚಾರದ ವಿರುದ್ಧ ಕಠಿಣ ಕ್ರಮ-ಕಾನೂನು ರೂಪಿಸಬೇಕಾದುದು ಕೆಂದ್ರ ಸರ್ಕಾರವೆ. ಆದಕ್ಕಾಗಿ ಹೋರಾಟ ನಡೆಸ ಬೇಕಾದುದೂ ಸಹ ಅನಿವಾರ್ಯವೇ. ಆದರೆ ಆ ಹೋರಾಟ ಉತ್ತಮ ಮನೋಭಾವದಿಂದ, ದೇಶಾಧ್ಯಂತ ನಡೆಯಬೇಕಾಗಿತ್ತಲ್ಲವೇ ? ಏಕೆಂದರೆ ಅತ್ಯಾಚಾರ- ಅನಾಚಾರಗಳು ದೆಹಲಿಗೆ ಮಾತ್ರ ಅಥವಾ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಅತ್ಯಾಚಾರಿಗಳಿಗೆ ರಾಜ್ಯ-ದೇಶಗಳ ಚಿಂತೆಯೂ ಇಲ್ಲ. ಅವು ಎಲ್ಲಾ ಕಡಗೂ ನಡೆಯುತ್ತಿವೆ. ಕೇವಲ ಕಾಂಗ್ರೆಸ್ ಸರ್ಕಾರವನ್ನು ಟಾರ್ಗೆಟ್ ಮಾಡುವುದರಿಂದ ಇದೊಂದು ರಾಜಕೀಯ ಪ್ರೇರಿತ ಹೋರಾಟವಾಗುತ್ತದೆಯೇ ವಿನಃ ಬೇರೇನಿಲ್ಲ.



ಕಾಮೆಂಟ್‌ಗಳು