ವಿಷಯಕ್ಕೆ ಹೋಗಿ

ಪ್ರಜಾಮತ ಅಶೋಕ್‌ ಬಾಬುರವರಿಗೆ ನಮನಗಳು



ನಾನು ಐದಾರು ಚಿಕ್ಕ ಚಿಕ್ಕ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೆಗಳು ಚಿಕ್ಕವಾದರೂ ಇವುಗಳ ಸಂಪಾದಕರು ಮಾತ್ರ ಸಾಮಾನ್ಯದವರು ಅಂತ ನನಗನ್ನಿಸಿಲ್ಲ. ಕೆಲವರಂತೂ ಅಂಗೈಯಲ್ಲೇ ಆಕಾಶ ತೋರಿಸಬಲ್ಲ ಜಾಣರು, ಮತ್ತು ಅವಕಾಶ ಸಿಕ್ಕರೆ ಅದೇ ಅಕಾಶವನ್ನೇ ನುಂಗಿ ಅರಗಿಸಿಕೊಳ್ಳಬಲ್ಲಷ್ಟು ಸಾಮರ್ಥ್ಯರು. ಅವರುಗಳಲ್ಲಿ ಇಬ್ಬರು ಅಂತಹ ಅಸಾಧಾರಣ ವ್ಯಕ್ತಿಗಳ ಜೊತೆ ಕೆಲಸ ಮಡುವ ಅವಕಾಶ ನನಗೆ ದೊರೆತಿತ್ತು.

ಮೊದಲನೆಯವರು ವಿ. ಶಶಿಧರ್‌. ಕೇವಲ ಇವರ ಹೆಸರು ಹೇಳಿದರೆ ಅಷ್ಟಾಗಿ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ದೇಶದಲ್ಲೇ ಏಕೈಕ 'ಪೊಲೀಸ್‌ ಮಹಾ ಸಂಘ'ವನ್ನು ನಮ್ಮ ರಾಜ್ಯದಲ್ಲಿ ಸ್ಥಾಪಿಸಿ ಅದರ ಮೂಲಕ ಇಡೀ ಇಲಾಖೆಗೆ ಮತ್ತು ಸರ್ಕಾರಕ್ಕೆ ತಲೆ ನೋವಾಗಿ ಒಂದು ಸಮಯದಲ್ಲಿ ಕಲರವವೆಬ್ಬಿಸಿದ ಶಶಿಧರ‍್ ಎಂದರೆ ಬಹುತೇಕರಿಗೆ ಗೊತ್ತಾಗಿ ಹೋಗುತ್ತದೆ. ಇಂದು ಪತ್ರಿಕೆ ನಿಲ್ಲಿಸಿದ್ದರೂ ಭ್ರಷ್ಟರ ಮೇಲೆ ದೂರು ದಾಖಲಿಸುತ್ತಾ ಕೆಲವರ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಒಂದು ಕೇಸಿನಲ್ಲಿ ಸೋನಿಯಾ ಗಾಂಧಿಗೂ ಹೈಕೋರ್ಟ್‌‌ನಿಂದ ನೋಟೀಸ್ ಕೊಡಿಸಿದ ಕೀರ್ತಿ ಇವರದು! ಇವರು ಸ್ಥಾಪಿಸಿದ 'ಪೊಲೀಸ್‌ ವರ್ಲ್ಡ್‌' ಪತ್ರಿಕೆಗೆ ಸುಮಾರು ಮೂರು ವರ್ಷ ದುಡಿದೆ. 

ಎರಡನೆಯವರು ಪ್ರಜಾಮತ ಖ್ಯಾತಿಯ ಅಶೋಕ್‌ ಬಾಬು. ನನಗೆ ತಿಳಿದಂತೆ ಇವರು ಕನ್ನಡ ಪತ್ರಿಕಾ ರಂಗದ ದಿಗ್ಗಜರೇ ಹೌದು. ನಾವು ಚಿಕ್ಕ ಹುಡುಗರಾಗಿದ್ದಾಗ ಇವರ ಪ್ರಜಾಮತ ಮನೆ ಮಂದಿಯ ಪತ್ರಿಕೆಯಾಗಿದ್ದರೆ 'ಸುರತಿ' ಎಂಬ ವಿಶಿಷ್ಟ ಲೈಂಗಿಕ ವಿಷಯಗಳ ಪತ್ರಿಕೆ ಸದ್ದಿಲ್ಲದೇ ಯುವಕ-ಯುವತಿಯರ ಅಂತರಂಗದ ಪತ್ರಿಕೆಯಾಗಿತ್ತು. ಆ ಸಮಯದಲ್ಲೇ ಐದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿದ್ದವಂತೆ ! (ರತಿ ವಿಜ್ಞಾನವೊಂದು ಇಲ್ಲದೇ ಹೋಗಿದ್ದರೆ ಪ್ರಸಾರ ಸಂಖ್ಯೆ ೧೦ ಲಕ್ಷ ದಾಟುತ್ತಿತ್ತು ) ಜನ ಸುರತಿಗಾಗಿ ಎಷ್ಟು ಕಾಯುತ್ತಿದ್ದರೆಂದರೆ ಸ್ವತಃ ಮುಖ್ಯಂತ್ರಿ ಗುಂಡೂರಾವ್ ಕರೆ ಮಾಡಿ 'ಈ ಸಲ ಏನು ಬರೆದಿದೀಯ ಮಾರಾಯ, ಸಾಧ್ಯವಾದರೆ ನನಗೆ ಮೊದಲೇ ಕಳಿಸಿ ಬಿಡು, ಓದಬಿಡುತ್ತೇನೆ' ಎಂದು ಕೇಳಿದ್ದೂ ಇದೆಯೆಂದು ಅಶೋಕ್‌ ಬಾಬು ಹೇಳುತ್ತಿದ್ದರು.

ಆದರೆ ನಂತರದ ದಿನಗಳಲ್ಲಿ ಸುರತಿಗಾಗಿಯೇ ಅವರ ಮೇಲೆ ಹತ್ತಾರು ದೂರುಗಳು ದಾಖಲಾಗಿ ಇನ್ನಿಲ್ಲದ ಪಡಿಪಾಟಲು ಪಡುವಂತಾಯ್ತು. ಸಾಲದ ಹೊರೆಯಲ್ಲಿ ನಲುಗಿದರು. ನಾವು ಕಚೇರಿಯಲ್ಲಿದ್ದ ಸಮಯದಲ್ಲೇ ರಾಜ್ಯದ, ದೇಶದ ಬಹುತೇಕ ಬ್ಯಾಂಕ್‌ಗಳಿಂದ ಸಾಲ ವಸೂಲಿಗಾಗಿ ಜನ ಬಂದು ಹೋಗುತ್ತಿದ್ದರು. ಇವರಿಲ್ಲದ ಸಮಯದಲ್ಲಿ ಎಗರಾಡುತ್ತಿದ್ದ ಸಾಲಗಾರರನ್ನು ಕೇವಲ ಎರಡು ನಿಮಿಷದ ಮಾತುಕತೆರ ಮೂಲಕ ಸರಿ ಮಾಡಿ ಕಳಿಸುತ್ತಿದ್ದ ಅವರ ಚಾಲಾಕಿತನ ನಿಬ್ಬೆರಗಾಗುವಂತೆ ಮಾಡಿತ್ತು. 

ಅಶೋಕ್‌ ಬಾಬು ನಡೆಸುತ್ತಿದ್ದ 'ನಮ್ಮ ಬೆಂಗಳೂರು' ಪತ್ರಿಕೆಯಲ್ಲಿ ಸಹ ಸಂಪಾದಕನಾಗಿ ಒಂದು ವರ್ಷ ದುಡಿದೆ. ಎಷ್ಟೋ ಸಮಯ ಕಚೇರಿಯಲ್ಲೇ (ಎನ್‌ಆರ್‌ ಕಾಲೋನಿಯ ಅವರ ಮನೆ) ಉಳಿದು ಅಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದೆವು. ಬ್ರಾಹ್ಮಣ ರಾಜಕಾರಣಿಗಳ ಕುತಂತ್ರಗಳನ್ನು ಸವಿವರವಾಗಿ ಬಿಚ್ಚಿಡುತ್ತಿದ್ದ ಇವರು ಮದುವೆಯಾಗಿದ್ದೂ ಬ್ರಾಹ್ಮಣ ಯುವತಿಯನ್ನೇ ಆಗಿತ್ತು !

ನಂತರದ ದಿನಗಳಲ್ಲಿ ಅವರ ಸಂಪರ್ಕ ನನಗೆ ಸಿಗಲಿಲ್ಲ. ಕೆ.ಎನ್‌.ಎನ್‌. ಸುದ್ದಿ ಸಂಸ್ಥೆ ಸ್ಥಾಪಿಸಿದ್ದು ಗೊತ್ತಾಯಿತು. ಹಾಗೆಯೇ ಪ್ರಜಾಮತವನ್ನೂ ಮರಳಿ ಪ್ರಾರಂಭಿಸಿದರು. ಇದರ ಬಗ್ಗೆ ನನಗೆ ಹೇಳದಿದ್ದುದರಿಂದ ನಾನೂ ಅವರನ್ನು ಸಂಪರ್ಕಿಸಲು ಹೋಗಲಿಲ್ಲ. ಆಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಅವರೇ ಕರೆ ಮಾಡಿ ಕ್ಷೇಮ ವಿಚಾರಿಸಿ 'ಪ್ರಜಾಮತ, ಕೆಎನ್‌ಎನ್‌ ಅನ್ನು ದೀನೇಶ್ ಅನ್ನುವವರು ನೋಡಿಕೊಳ್ತಿದಾರೆ. ಬೇಕಾದರೆ ನೀವೂ ಸೇರಿಕೊಳ್ಳಿ, ಬನ್ನಿ' ಎಂದು ಕರೆದರು. ಆದರೆ ನಾನಾಗಲೇ ಪತ್ರಿಕಾ ರಂಗದ ಸಹವಾಸ ಸಾಕು ಎಂದು ವೆಬ್‌ಡಿಸೈನ್ ಕಲಿಯುತ್ತಿದ್ದೆ. ಮುಂದೆ ಅವರ ಸಂಪರ್ಕ ಸಿಗಲೇ ಇಲ್ಲ.

ಇಂತಹ ಅಶೋಕ್‌ ಬಾಬು ಮೊನ್ನೆ ತೀರಿಕೊಂಡರು. ಅವರ ನೆನಪು ಸದಾ ಉಳಿದಿರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...