ವಿಷಯಕ್ಕೆ ಹೋಗಿ

ತಾನೊಂದು ಬಗೆದರೆ....



ನಾನು ಇಪ್ಪತ್ತು ವರ್ಷದವನಿದ್ದಾಗ ಚೆನ್ನೈ ಸಮೀಪದ ವೆಳ್ಳವೇಡು ಎಂಬ ಸ್ಥಳದಲ್ಲಿ ಪೋಟೋ ಸ್ಟುಡಿಯೋ ಹಾಕಿದ್ದೆ. ಹೆದ್ದಾರಿ ಪಕ್ಕದಲ್ಲಿದ್ದರೂ ಆ ಊರಿಗೆ ಪೋಟೋ ಸಟುಡಿಯೋ ಅಂತ ಬಂದಿದ್ದು ಅದೇ ಮೊದಲು. (ಇದರ ಪೂರ್ಣ ಕತೆ ಬರೆದರೆ ಒಂದು ಹಾಸ್ಯ ಪ್ರಬಂಧವೇ ಆಗುತ್ತದೆ.) 

ಒಂದು ದಿನ ವ್ಯಕ್ತಿ ಬಂದು ತಮ್ಮೂರಿನಲ್ಲಿ ಸಟುಡಿಯೋ ಹಾಕಿದ್ದಕ್ಕೆ ಸಂತೋಷದಿಂದ ಕೃತಜ್ಞತೆ ಹೇಳಿ 'ತುಂಬಾ ಅನುಕೂಲವಾಯಿತು. ಇಲ್ಲಾಂದರೆ ಯಾವುದಾದರೂ ಕಾರ್ಯಕ್ರಮ ನಡೆದರೆ ದೂರದಿಂದ ಕ್ಯಾಮೆರಾಮೆನ್‌ ಕರೆಸಬೇಕಿತ್ತು. ಚಿಕ್ಕ ಪುಟ್ಟ ಕಾರ್ಯಗಳಿಗೆ ದೂರ ಅಂತ ಅವರೂ ಬರುತ್ತಿರಲಿಲ್ಲ.' ಎಂದೆಲ್ಲಾ ಹೇಳಿ ಕೊನೆಗೆ 'ತನಗೆ ಇಬ್ಬರು ಮಕ್ಕಳು, ಒಂದು ಹೆಣ್ಣು, ಮತ್ತು ಗಂಡು. ದೊಡ್ಡವಳು ಇನ್ನೇನು ವಯಸ್ಸಿಗೆ ಬರುವವಳಿದ್ದಾಳೆ, ಪೂ ಪೂಕ್ಕುಂ ವಿಳಾಗೆ (ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ತಮಿಳುನಾಡಲ್ಲಿ ಬಡವರಾದರೂ ಸಹ ಸ್ವಲ್ಪ ಅದ್ದೂರಿಯಾಗಿಯೇ ಕಾರ್ಯಕ್ರಮ ಮಾಡುತ್ತಾರೆ.) ಬಂದು ಒಳ್ಳೊಳ್ಳೆ ಫೋಟೋ ತೆಗೆದು ಕೊಡು. ನಂತರ ಮದುವೆಗೂ ನೀನೇ ಬರುವಂತೆ' ಎಂದು ಹೇಳಿ ಹೋದ.

ನನ್ನ ಸ್ಟುಡಿಯೋ ಎದುರು ರಸ್ತೆ. ಮತ್ತು ರಸ್ತೆಯನ್ನು ದಾಟಿದರೆ ಪೊಲೀಸ್‌ ಠಾಣೆ ಇತ್ತು. ಸುಮಾರು ದಿನಗಳ ನಂತರ ಒಬ್ಬ ಪೇದೆ ಬಂದು 'ಆಕ್ಸಿಡೆಂಟ್‌ ಆಗಿದೆ ಬಾ' ಎಂದು ಕರೆದ. ಅದು ವಿಭಾಗ ಮಾಡಿರದ ಹೆದ್ದಾರಿಯಾದುದರಿಂದ ತಿಂಗಳಿಗೆ ಒಂದಾದರೂ ಪ್ರಾಣಹಾನಿಯ ದುರಂತಗಳು ನಡೆಯುತ್ತಿದ್ದವು. ಕ್ಯಾಮೆರಾ ಬ್ಯಾಗ್‌ ಹೆಗಲಿಗೇರಿಸಿಕೊಂಡು ಅವನ ಬೈಕ್‌ ಹತ್ತಿ ಹೊರಟೆ. ಒಂದೆರಡು ಕಿ.ಮೀ. ದೂರದಲ್ಲೇ ಜನ ಸೇರಿರುವುದು ಕಾಣಿಸಿತು. ಹತ್ತಿರ ಹೋದಾಗ ಒಂದು ಮರಳು ಲಾರಿ ರಸ್ತೆ ಪಕ್ಕದ ಗುಡಿಸಲಿನ ಮೇಲೆ ಏರಿ ನಿಂತಿತ್ತು. ಜನರೆಲ್ಲಾ ಸೇರಿ ಮತ್ತೊಂದು ಲಾರಿಯ ಮೂಲಕ ಇದನ್ನು ಹಿಂದೆ ಎಳೆದು ಗುಡಿಸಲೊಳಗೆ ಸಿಕ್ಕಿಕೊಂಡವರನ್ನು ಹೊರ ತೆಗೆಯುತ್ತಿದ್ದರು. ನಾನು ವಿವಿಧ ಕೋನಗಳಿಂದ ಪೊಲೀಸರು ತಿಳಿಸದಂತೆ ಫೋಟೋ ತೆಗೆಯತೊಡಗಿದೆ.

ಲಾರಿಯಡಿ ಸಿಕ್ಕಿ ನಾಲ್ಕು ಜನ ಸಾವನ್ನಪ್ಪಿದ್ದರು. ಅದರಲ್ಲಿ ಇಬ್ಬರು ಮಕ್ಕಳು. ಒಂದು ಏಳೆಂಟು ವರ್ಷದ ಹುಡುಗಿ, ಮತ್ತೊಂದು ಐದಾರು ವರ್ಷದ ಹುಡುಗ. ಅವರ ದೇಹವನ್ನು ತಂದು ಒಂದು ಬದಿ ಮಲಗಿಸಿದಾಗ ಅವನ್ನೂ ಫೋಟೋ ತೆಗೆಯತೊಡಗಿದೆ. ಆಗ ಓಡೋಡಿ ಬಂದು ರೋಧಿಸತೊಡಗಿದ ಆ ವ್ಯಕ್ತಿ ಹಿಂದೆ ನನ್ನ ಬಳಿ ಮಾತಾಡಿದವನೇ ಆಗಿದ್ದು, ಸತ್ತಿದ್ದು ಆತನ ಹೆಂಡತಿ, ಬಾವ, ಮತ್ತು ಮಕ್ಕಳೇ ಆಗಿದ್ದರು. 

ರಕ್ತ ಮೆತ್ತಿದ ಆ ಎಳೆ ದೇಹಗಳ ಚಿತ್ರ ತೆಗೆಯುವಾಗ ಅವನು ಬಂದು ನನ್ನ ಕಾಲು ಹಿಡಿದು 'ನನ್ನ ಮಗಳ ನಗುವ ಫೋಟೋ ತೆಗೆದುಕೊಡು ಅಂದಿದ್ದೆ, ಈಗ ಸತ್ತ ಫೋಟೋ ತೆಗಯುವಂತಾಯ್ತಲ್ಲಾ...' ಎಂದು ಅಳುತ್ತಿರುವಾಗ ನನ್ನ ಕಣ್ಣಿಂದ ಉದುರಿದ ನೀರು ಕ್ಯಾಮೆರಾ ನೆನೆಸಿದ್ದವು!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...