
ಭೂಮಿ ವೇಗವಾಗಿ ಸುತ್ತುತ್ತಿದೆ ಎಂಬುದನ್ನು ಒಪ್ಪದವರು ಮುಂದಿಡುವ ಒಂದು ಪ್ರಶ್ನೆ ಹೀಗಿದೆ. "ಭೂಮಿ ಅಷ್ಟು ವೇಗವಾಗಿ ತಿರುಗುತ್ತ ಇದ್ದರೆ ಒಂದು ವಿಮಾನವು ಚೀನಾದಿಂದ ಸೌದಿಗೆ ಹೋಗಬೇಕಾದಲ್ಲಿ ಸ್ವಲ್ಪ ಮೇಲೆ ಹೋಗಿ ನಿಂತುಕೊಂಡರೆ ಸಾಕಲ್ಲ, ಭೂಮಿ ತಿರುಗುವುದರಿಂದ ಸೌದಿ ಅರೇಬಿಯಾ ತಾನಾಗಿಯೇ ವಿಮಾನದ ಕೆಳಗೆ ಬರುತ್ತದೆ. ಅಥವಾ ಮೂಡಣ ದಿಕ್ಕಿಗೆ ಹೊರಟ ವಿಮಾನವು ತಡವಾಗಿ ತಲುಪಬೇಕು ಮತ್ತು ಪಡುವಣ ದಿಕ್ಕಿಗೆ ಹೊರಟ ವಿಮಾನವು ಬೇಗನೆ ತಲುಪಬೇಕು" ಎಂಬ ವಾದವನ್ನು ಮುಂದಿಡುತ್ತಾರೆ.
ಆದರೆ ಹಾಗೆ ಆಗಲು ಸಾಧ್ಯವಿಲ್ಲ, ಏಕೆಂದರೆ ಭೂಮಿ ಅಂದರೆ ಬರೀ ನೆಲವಷ್ಟೇ ಅಲ್ಲ, ಅದರ ಸುತ್ತಲಿನ ವಾತಾವರನವೂ ಸೇರಿ ಅದರ ಜೊತೆಗೇ ತಿರುಗುತ್ತಾ ಇದೆ. ಹಾಗಾಗಿ ವಿಮಾನವು ಮೇಲೆ ಹೋಗಿ ನಿಂತರೂ ಸಹ ಅದು ಭೂಮಿಯ ಜೊತೆಗೇ ಸಾಗುತ್ತದೆಯಾದ್ದರಿಂದ ಕೆಳಗಿನ ನೆಲ ಮಾತ್ರ ಜರುಗಲು ಸಾಧ್ಯ ಇಲ್ಲ. ಇದನ್ನು ನಾವೇ ಪರಿಶೀಲಿಸಬಹುದು.
ಹೇಗೆಂದರೆ..
ವೇಗವಾಗಿ ಹೋಗುತ್ತಿರುವ ರೈಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿ ಅದರ ಮಾಡಿನ ಹತ್ತಿರದಿಂದ ಒಂದು ಚಿಕ್ಕ ವಸ್ತುವನ್ನು (ಉದಾ : ಗೋಲಿ) ಬಿಟ್ಟರೆ ಅದು ನಾವು ಬಿಟ್ಟಬಿಂದುವಿನ ನೇರಕ್ಕೇ ಬಿಳುತ್ತದೆಯೆ ಹೊರತಾಗಿ ರೈಲು ಓಡುತ್ತಿರುವುದರಿಂದ ಸ್ವಲ್ಪ ಹಿಂದೆ ಬೀಳುವುದಿಲ್ಲ. ಹಾಗೆಯೇ ಗಾಳಿಯಾಡದಂತೆ ಮುಚ್ಚಿದ ರೈಲು ಬೋಗಿಯ ಒಳಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಚೆಂಡನ್ನು ಒಂದೇ ಜೋರಿನಲ್ಲಿ ಎಸೆದರೆ ಅದು ಎರಡೂ ದಿಕ್ಕಿಗೂ (ಮುಂದಿನಿಂದ ಹಿಂದೆ ಮತ್ತು ಹಿಂದಿನಿಂದ ಮುಂದೆ) ತಲುಪುವ ಸಮಯ ಒಂದೇ ಇರುತ್ತದೆ.
ಇದಕ್ಕೆಲ್ಲಾ ಕಾರಣ ಏನು ಎಂದರೆ ರೈಲು ಬೋಗಿಯ ಜೊತೆಗೇ ಅದರ ಒಳಗಿರುವ ಗಾಳಿಯೂ ಸಾಗುತ್ತಾ ಇರುವುದರಿಂದ ಆ ರೈಲು ಬೋಗಿಯೇ ಒಂದು ಚಿಕ್ಕ ಭೂಮಿಯಾಗಿ ಇರುತ್ತದೆ. ಹಾಗಾಗಿ ಅದರ ಒಳಗಿನ ಎಲ್ಲಾ ವಸ್ತುಗಳೂ ಬೋಗಿಯ ವೇಗಕ್ಕೆ ಹೊಂದಿಕೊಂಡು ಬಿಟ್ಟಿರುತ್ತವೆ. ಅದೇ ರೀತಿ ಭೂಮಿಯ ಎಲ್ಲಾ ವಸ್ತುಗಳೂ (ಗಾಳಿಯ ಅಣುಗಳೂ ಸೇರಿದಂತೆ) ಇದರ ವೇಗಕ್ಕೆ ಹೊಂದಿಕೊಂಡಿರುವುದರಿಂದ ವಿಮಾನ ಯಾವ ದಿಕ್ಕಿಗೆ ಹೊರಟರೂ ಅದರ ವೇಗದಲ್ಲಿ ಯಾವುದೇ ಬೇರ್ಪಾಡು ಉಂಟಾಗುವುದಿಲ್ಲ.
ಕಾಮೆಂಟ್‌ಗಳು