ವಿಷಯಕ್ಕೆ ಹೋಗಿ

ಮತದಾನದ ಗುರುತಿನ ಚೀಟಿ ಪಡೆಯುವ ಯಮ ಸಾಹಸ


ಈ ದೇಶದ ನಾಗರಿಕರು ಅಂತ ಹೇಳಿಕೊಳ್ಳಲು ಎಷ್ಟು ಆಧಾರಗಳಿದ್ದರೂ ಸಾಲದು. ಹತ್ತಾರು ಗುರುತಿನ ಚೀಟಿಗಳಿದ್ದರೂ ಒಂದೊಂದು ಕಡೆ ಒಂದೊಂದನ್ನು ಕೇಳುತ್ತಾ ಗೊಂದಲ ಹುಟ್ಟಿಸುವುದೇ ಸರ್ಕಾರದ ಕರ್ತವ್ಯವಾಗಿದೆ. ಅವುಗಳನ್ನು ಪಡೆಯಲು ಯಾವುದೇ ಸರಳ ವಿಧಾನಗಳೇ ಇಲ್ಲ. ಅಂತಹುದರಲ್ಲಿ ಪ್ರಮುಖವಾದ 'ಮತದಾರರ ಗುರುತಿನ ಚೀಟಿ' ಪಡೆಯಲಿಕ್ಕಂತೂ ನಾನಾ ತೊಂದರೆಗಳು.

ನಾನು ಈ ಹಿಂದೆಯೇ ಇದನ್ನು ಪಡೆದಿದ್ದರೂ ಮನೆಯನ್ನು ಬದಲಾಯಿಸಿದ್ದರಿಂದ ಹೊಸ ವಿಳಾಸಕ್ಕೆ ಅದನ್ನು ಬದಲಾಯಿಸಬೇಕಾಗಿತ್ತು. ಒಂದೇ ಕ್ಷೇತ್ರದ ಬೇರೆ ವಾರ್ಡ್‍ಗೆ ವಿಳಾಸ ಬದಲಾಯಿಸುವುದಷ್ಟೇ ಕೆಲಸ. ಎರಡು ವರ್ಷದಿಂದ ಇದರ ಬಗ್ಗೆ ತನಿಖೆಗೆ ಇಳಿದಿದ್ದೆ... ಹೇಗೆ ಬದಲಾಯಿಸುವುದು ಎಂದು ತಿಳಿಯಲು.  

ಚುನಾವಣಾ ಇಲಾಖೆಯ ಜಾಲತಾಣದಲ್ಲಿ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಎಂದುಕೊಂಡು ಅವರ ಜಾಲತಾಣವಾದ http://ceokarnataka.kar.nic.in/ ನಲ್ಲಿ ಒಂದು ಖಾತೆಯನ್ನು ತೆರೆದು ಅಲ್ಲಿ ಪ್ರಯತ್ನಿಸಿದೆ. ಅಲ್ಲಿ ತಿಳಿದು ಬಂದ ವಿಷಯವೇನೆಂದರೆ ಸಧ್ಯಕ್ಕೆ ಆನ್‍ಲೈನ್‍ನಲ್ಲಿ ವಿಳಾಸ ಬದಲಾವಣೆ ಸಾಧ್ಯವಿಲ್ಲ, ಆದ್ದರಿಂದ ಕಚೇರಿಗೆ ತೆರಳಿ ಮಾಡಿಸಿಕೊಳ್ಳಬೇಕು ಎಂಬುದು.



ಆ ವಿಷಯವನ್ನು ಕೈ ಬಿಟ್ಟು ಯಾವ ಕಚೇರಿಯಲ್ಲಿ ಸಾಧ್ಯ ಎಂದು ತನಿಖೆ ಕೈಗೊಂಡೆ. ಏಕೆಂದರೆ ಚುನಾವಣಾ ಇಲಾಖೆಯ ಕಚೇರಿ ಎಲ್ಲಿದೆ ಅಂತ ಗೊತ್ತಿರಲಿಲ್ಲ. ಸತತ ತನಖೆಯ ನಂತರ ಮಹಾನಗರ ಪಾಲಿಕೆಯ ಸ್ಥಳೀಯ ಕಚೇರಿಯಲ್ಲೇ ಇದನ್ನು ಮಾಡಿಕೊಡುತ್ತಾರೆ ಎಂಬ ಸುಳಿವು ಸಿಕ್ಕಿತು. ಒಂದು ಶುಭ ಮುಹೂರ್ತದಲ್ಲಿ ಪತ್ರಿಕೆಯಲ್ಲಿ ಮತದಾರರ ಹೊಸ ಚೀಟಿ, ವಿಳಾಸ ಬದಲಾವಣೆ ಮುಂತಾದ ಕೆಲಸಗಳು ಶುರುವಾಗಿವೆ ಎಂಬ ಮಾಹಿತಿ ಬಂತು. ಕೂಡಲೆ ನನ್ನ ವಾರ್ಡ್‍ಗೆ ಸಂಬಂಧಿಸಿದ ವಾರ್ಡ್ ಕಚೇರಿಗೆ ಹೋಗಿ ವಿಚಾರಿಸಿದೆ. ಅಲ್ಲಿದ್ದ ಅಧಿಕಾರಿ ಅತ್ಯಂತ ಕಳಪೆ ಮಟ್ಟದ ಮುಖಭಾವದೊಂದಿಗೆ 'ಈಗ ಫಾರಂ ಇಲ್ಲ, ಮುಂದಿನ ಗುರುವಾರ ಬನ್ನಿ' ಎಂದು ಹೇಳಿ ಸಾಗ ಹಾಕಿದ. ಯಾರಪ್ಪನ ಮನೆಯ ಸಂಬಳ ತಿಂದು ಈ ಸೋಮಾರಿಗಳು ಬದುಕುತ್ತಿದ್ದಾರೆ ಎಂಬ ಜ್ಞಾನ ಅವರಿಗೇ ಇಲ್ಲ.

ಈ ಕಚೇರಿಗೆ ತಿರುಗಾಡುತ್ತಿದ್ದರೆ ನನ್ನ ಸಮಯ ವ್ಯರ್ಥವಾಗುತ್ತದೆ ಎಂದು ಮತ್ತೆ ಜಾಲತಾಣದಲ್ಲೆ ಪ್ರಯತ್ನಕ್ಕಿಳಿದೆ. ಈ ಬಾರಿ ಅದೃಷ್ಟ ಕುಲಾಯಿಸಿತೇನೋ ಎಂಬಂತೆ ಆನ್‍ಲೈನ್‍ನಲ್ಲೆ ವಿಳಾಸ ಬದಲಾಯಿಸಲು ಅವಕಾಶ ನೀಡಿದ್ದರು. ಸುಲಭವಾಗಿ ಐದೇ ನಿಮಿಷದಲ್ಲಿ ಮಾಡಿ ಮುಗಿಸಿ ಬಿಡಬಹುದು ಎಂದುಕೊಂಡು ಕಾರ್ಯಾಚರಣೆಗಿಳಿದೆ... ನಂತರವೇ ತಿಳಿದಿದ್ದು ಅದು ಕಾರ್ಗಿಲ್ ಕಾರ್ಯಾಚರಣೆಗಿಂತ ಬಿಗಿ ಎಂದು. ಒಮ್ಮೆ ಗುಪ್ತಪದವನ್ನು ಬದಲಾಯಿಸಿಕೊಳ್ಳೋಣ ಎಂದು ಪ್ರಯತ್ನಿಸಿದೆ ನೋಡಿ, ಅಷ್ಟೇ... ನಂತರ ಸರಿಯಾದ ಗುಪ್ತಪದ ಹಾಕಿದರೂ ತಾಣದಲ್ಲಿ ಪ್ರವೇಶ ಮಾಡಲು ಆಗಲಿಲ್ಲ. 
ಮತ್ತೆ ಸುಮಾರು ದಿನ ಈ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ಸುಮ್ಮನಾದೆ. ಮತ್ತೊಂದು ದಿನ ಪ್ರಯತ್ನಿಸಿದಾಗ ತಾಣದೊಳಗೆ ಪ್ರವೇಶಿಸಲು ಅವಕಾಶ ದೊರೆಯಿತು. ಆಗ ಗುಪ್ತಪದವನ್ನು ಬದಲಾಯಿಸುವ ಯೋಚನೆ ಕೈಬಿಟ್ಟು ನೇರ ಹೋರಾಟಕ್ಕೆ ಇಳಿದೆ. ಆನ್‍ಲೈನ್‍ನಲ್ಲೆ ವಿಳಾಸದ ಅರ್ಜಿ ತುಂಬಲು ತೊಡಗಿದೆ. ಅದಕ್ಕೂ ಅನೇಕ ದಾಖಲೆಗಳನ್ನು ನೀಡಬೇಕಾಯ್ತು. ಎಲ್ಲವನ್ನೂ ನೀಡಿಯಾದ ಮೇಲೆ ಪೂರ್ತಿಯಾಯ್ತು ಅಂದುಕೊಂಡಾಗ ತಾಣವೇ ಹ್ಯಾಂಗ್ ಆಯ್ತು! ಅವತ್ತಿನ ಕಾರ್ಯಚರಣೆಯನ್ನು ಮತ್ತೆ ಸ್ಥಗಿತಗೊಳಿಸಿದೆ.

ಮರುದಿನ ಪ್ರಯತ್ನಿಸಿದಾಗಲೂ ಹೀಗೇ ಆಯ್ತು. ಮತ್ತೆ ಕಚೇರಿಗೆ ಹೋಗಿ ಅಧಿಕಾರಿಯ ಮುಖ ನೋಡುವ ಆಸಕ್ತಿ ಇರಲಿಲ್ಲ. ಆದರೆ ಭಾರತದ ಪ್ರಜೆಯಾಗಿ ಮತ ಚಲಾಯಿಸುವ ಹಕ್ಕನ್ನು ಇಷ್ಟು ಕೆಟ್ಟದಾಗಿ ಕಳೆದುಕೊಳ್ಳಲೂ ತಯಾರಿಲ್ಲದೆ ಮತ್ತೆ ಮತ್ತೆ ಆನ್‍ಲೈನ್‍ನಲ್ಲೇ ಪ್ರಯತ್ನಿಸಿದೆ. ಒಂದು ಬಾರಿ ಅರ್ಜಿಯು ಸಬ್‍ಮಿಟ್ ಆಗಿ ಬಿಟ್ಟರೆ ಮುಗಿಯಿತು, ನಂತರ ಅವರು ಯಾವಾಗ ಬೇಕಾದರೂ ನನ್ನ ವಿಳಾಸಕ್ಕೆ ಗುರುತಿನ ಚೀಟಿ ಕಳಿಸುತ್ತಾರೆ ಎಂಬ ವಿಶ್ವಾಸ ನನ್ನದು. ಸತತ ಪ್ರಯತ್ನದ ನಂತರ ಒಂದು ದಿನ ಕೊನೆಗೂ ನನ್ನ ಅರ್ಜಿ ಸಬ್‍ಮಿಟ್ ಆಗೇ ಹೋಯ್ತು. ಖುಶಿಯಿಂದ ಇನ್ನೇನು ಕುಣಿಯಬೇಕು ಅನ್ನುವಾಗ ಅಲ್ಲಿ ತೋರಿಸಿದ ವಾಕ್ಯ "ನೀವು ನೀಡಿದ ಎಲ್ಲಾ ದಾಖಲೆಗಳ ಪ್ರತಿಯೊಂದಿಗೆ ಈ ಅರ್ಜಿಯ ಪ್ರತಿಯನ್ನೂ ಸೇರಿಸಿ ಈ ಕೆಳ ಕಂಡ ವಿಳಾಸಕ್ಕೆ ಅಂಚೆ ಮುಖಾಂತರ ಕಳಿಸಬೇಕು!"

ಚುನಾವಣಾ ಆಯೋಗವೂ ಇಷ್ಟು ಎಡವಟ್ಟಾಗಿರುತ್ತದೆ ಎಂದು ತಿಳಿದುದೆ ಆಗ. ಚುನಾವಣೆಯನ್ನೇನೋ ನಿರ್ಭೀತಿಯಿಂದ, ಸುಲಲಿತವಾಗಿ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಮತದಾನದ ಗುರುತಿನ ಚೀಟಿ ವಿತರಣೆಯನ್ನು ಮಾತ್ರ ಮಹಾ ಅದ್ವಾನದಿಂದ ವಿತರಿಸುತ್ತಾರೆ. ಯಾಕೆ ಹೀಗೆ ? ಆನ್‍ಲೈನ್‍ನಲ್ಲಿ ಎಲ್ಲಾ ಭರ್ತಿ ಮಾಡಿದ ನಂತರ ಮತ್ತೆ ಅದನ್ನು ಅಂಚೆ ಮುಖಾಂತರ ಯಾಕೆ ಕಳಿಸಬೇಕು ? ಹಾಗಿದ್ದರೆ ನಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡು ಆನ್‍ಲೈನ್ ಸರ್ಕಸ್ ಮಾಡುವ ಅಗತ್ಯವಾದರೂ ಏನು ? ನನ್ನ ಪ್ರಕಾರ ಆಧಾರ್ ಸಂಖ್ಯೆ, ವಾಹನ ಚಾಲನ ಪತ್ರ ಹೀಗೆ ಸರ್ಕಾರದ ಪ್ರಮುಖ ಯಾವುದಾದರೊಂದು ದಾಖಲೆಯ ಸಂಖ್ಯೆಯನ್ನು ಆನ್‍ಲೈನ್‍ನಲ್ಲಿ ಪಡೆದು ಮತದಾನದ ಗುರುತಿನ ಚೀಟಿಯನ್ನು ನೀಡಬಹುದು. ಅದರಲ್ಲೂ ಆಧಾರ್ ಇದ್ದರೆ ಬೇರೆ ಯಾವುದೇ ದಾಖಲೆ ಕೇಳದೆಯೇ ನೀಡಬೇಕು. ಆದರೂ ಈ ಯಡವಟ್ಟು ಸರ್ಕಾರಿ ಅಧಿಕಾರಿಗಳಿಗೆ ಏನಾಗಿದೆ ? ಇವರು ಹೊಟ್ಟೆಗೆ ಅದೇನು ತಿನ್ನುತ್ತಾರೆ ? 'ಸರಳ' ಅನ್ನುವ ಪದವೇ ಇವರ ಶಬ್ದಕೋಶದಲ್ಲಿ ಇಲ್ಲ ಯಾಕೆ ?

ಮಾಡಿದ್ದುಣ್ಣೋ ಮಹರಾಯ ಎಂಬಂತೆ ಎಲ್ಲಾ ದಾಖಲೆಗಳನ್ನೂ ಮುದ್ರಿಸಿ ನನ್ನ ಬಳಿಯಿದ್ದ ಸ್ಟಾಂಪ್ ಅಂಟಿಸಿ ಅಂಚೆ ಡಬ್ಬಿಯನ್ನು ಹುಡುಕಿ ಹೊರಟೆ. ಆಗೀಗ ನೋಡಿದ ಡಬ್ಬಿಗಳೆಲ್ಲಾ ಮಾಯವಾಗಿದ್ದವು. ಕೊನೆಗೂ ಒಂದು ಡಬ್ಬಿ ಕಾಣಿಸಿತು ಎಂದು ಓಡೋಡಿ ಹೋಗಿ ಅದರೊಳಗೆ ಹಾಕಲು ನೋಡಿದರೆ ಅದು ಒಳಗೇ ಹೋಗಲಿಲ್ಲ. ಪರಿಶೀಲಿಸದಾಗ ಅದರೊಳಗಿನ ಪತ್ರಗಳನ್ನು ಖಾಲಿ ಮಾಡದೆ ಅದೆಷ್ಟೋ ಸಮಯವಾದಂತಿತ್ತು. ಇದರಲ್ಲಿ ಹಾಕಿದರೆ ಚುನಾವಣೆ ಮುಗಿದರೂ ನನಗೆ ಗುರುತಿನ ಚೀಟಿ ಸಿಗದು ಎಂದು ಕೊರಿಯರ್ ಮಾಡಲು ಹೋದೆ. ಅಲ್ಲಿನ ವ್ಯಕ್ತಿ 'ಏನ್ ಸರ್, ಕೊರಿಯರ್‍ಗೆ ಸ್ಟಾಂಪ್ ಹಚ್ಚಿ ತಂದಿದೀರಾ.. ಅದೇನೂ ಬೇಡವಾಗಿತ್ತು.' ಎಂದು ಪೆದ್ದನನ್ನು ನೋಡುವಂತೆ ನನ್ನನ್ನು ನೋಡಿದ. 'ಅದು ನನಗೂ ಗೊತ್ತು ರೀ.., ಆದ್ರೆ ವಿಷಯ ಹೀಗಾಯ್ತು..' ಎಂದು ನಡೆದುದನ್ನು ತಿಳಿಸಿ, ನಾನು ಪೆದ್ದನಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದೆ. ಅಂತೂ ಕೊರಿಯರ್ ಮಾಡಿ ಮನೆಗೆ ಬಂದು ಉಸ್ಸಪ್ಪಾ ಎಂದು ಕುಳಿತೆ. 

ಅದನ್ನು ಕಳಿಸಿ ಅದಾಗಲೆ ಎರಡು ತಿಂಗಳು ಕಳೆಯಿತು. ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದೇನೆ... ಆದರೆ ಇನ್ನೂ ನನ್ನ ಗುರುತಿನ ಚೀಟಿ ಇದುವರೆಗೂ ಬಂದಿಲ್ಲ. ಚುನಾವಣೆ ಬೇರೆ ಹತ್ತಿರ ಬಂತು... ಅಷ್ಟರೊಳಗೆ ಬರುತ್ತೋ ಅಥವಾ ನನ್ನ ಮತ ಈ ಸಾರಿ ಹೊಗೆಯೋ ಏನೋ ಗೊತ್ತಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...