ವಿಷಯಕ್ಕೆ ಹೋಗಿ

ಮಾಂಸ-ಮದ್ಯ ಮತ್ತು ವೈಷ್ಣವ ದೀಕ್ಷೆ !


ಕುರುಬರು ಮಾಂಸ-ಮದ್ಯ ಬಿಟ್ಟು ಬಂದರೆ ತಾನು ವೈಷ್ಣವ ದೀಕ್ಷೆ ನೀಡಲು ತಯಾರು ಎಂದು ಉಡುಪಿಯ ಶುದ್ಧ ಬ್ರಾಹ್ಮಣ ಪೇಜಾವರ ತುದಿಗಾಲಲ್ಲಿ ನಿಂತು ದೀಪಾವಳಿ ಧಮಾಕದ ಕೊಡುಗೆಯನ್ನು ಈ ಬಾರಿ ಕುರುಬರಿಗೆ ನೀಡಿದ್ದಾರೆ. ಇದನ್ನು ಕೇಳಿದ ಕುರುಬರು ಪೇಜಾವರರ ಮತ್ತೊಂದು ಬಣ್ಣದ ಮಾತನ್ನು ನಂಬದೇ ಪೆಕಪೆಕ ನಕ್ಕು ಹಬ್ಬಕ್ಕೆ ಕುರಿ ಮಾಂಸ ತರಲು ಹೊರಟಾಗಿದೆ. 
ಮೊದಲಿಗೆ ಪೇಜಾವರರ ರಾಜಕೀಯ, ಜಾತೀಯ ಮನಸ್ಥಿತಿಯನ್ನು ಬಲ್ಲವರ‍್ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಗೋಜಿಗೇ ಹೋಗಿಲ್ಲ. ಆದರೆ ಪೇಜಾವರ ಎಂದರೆ ಒಂದೇ ಕಲ್ಲಲ್ಲಿ ಎರಡ್ಮೂರು ಹಕ್ಕಿ ಬೀಳಬಹುದೇನೋ ಎಂದು ಉಡುಪಿಯಲ್ಲಿ ಕುಳಿತೇ ವಿಧಾನ ಸೌಧಕ್ಕೆ ಕಲ್ಲು ಎಸೆಯಬಹುದಾದ ಚಾಲಾಕಿ ಮನುಷ್ಯ! ಅವರ ಇತ್ತೀಚಿನ ಹೇಳಿಕೆ ಕುರುಬರಿಗೆ ದೀಕ್ಷೆ ಎಂಬುದು ಸಾಣೆ ಹಿಡಿದ ನುಣುಪಾದ ಕಲ್ಲು ಮಾತ್ರ.
ಇಷ್ಟಕ್ಕೂ ಇಷ್ಟು ದಿನದ ಇವರ ದಲಿತೋದ್ಧಾರ ಕಾರ್ಯಕ್ರಮ ಎಲ್ಲಿವರೆಗೆ ಬಂತು ಅನ್ನುವುದು ತಿಳಿದು ಬಂದಿಲ್ಲ. ಮೂರ್ನಾಲ್ಕು ಬಾರಿ ದಲಿತರ ಕೇರಿಗೆ ಪ್ರವಾಸ ಹೋಗಿ ಬಂದ ಇವರಿಗೆ ಅದರಿಂದ ಯಾವ ಲಾಭವೂ ಗಿಟ್ಟಲಿಲ್ಲ. ದಲಿತರಿಗೂ ಒಳಿತಾಗಲಿಲ್ಲ. ಅತ್ತ ದಲಿತರೂ ಉದ್ಧಾರವಾಗಲಿಲ್ಲ, ಇತ್ತ ಮಠವೂ ದಲಿತರಿಗೆ ಬಾಗಿಲು ತೆರೆಯಲಿಲ್ಲ. ಅದೊಂದಿಷ್ಟು ಚಮತ್ಕಾರ ನಡೆಸಿದಂತೆ ಮಾಡಿ ದಲಿತರ ಪ್ರೀತಿ ಗಳಿಸುವ ನಾಟಕವಾಡಿ ಸುಮ್ಮನಾದರು. ಈಗ ಕುರುಬರ ಮೇಲೆ ಪ್ರೀತಿ ಉಕ್ಕಿ ಹರಿದಿದೆ. ಅದು ಎಷ್ಟು ದಿನ ಉಕ್ಕುತ್ತೋ ಶ್ರೀಕೃಷ್ಣ ಪರಮಾತ್ಮನೇ ಬಲ್ಲ!
ಪೇಜಾವರರಿಗೆ ಇದೀಗ ಎಂಬತ್ತು ದಾಡಿದೆ ಎಂಬ ಸುದ್ದಿ ಇದೆ. ಆದರೆ ಅವರ ನಡೆ ನುಡಿ ಎಂಟು ನೂರು ವರ್ಷಗಳ ಹಿಂದಿನಂತಿವೆ. ಅಲ್ಲಾ, ಇವರ ದೀಕ್ಷೆ ನಂಬಿಕೊಂಡು ಯಾವ ಕುರುಬ ಕಾದುಕೊಂಡಿದ್ದಾನೆ ? ಇಷ್ಟಕ್ಕೂ ವೈಷ್ಣವ ದೀಕ್ಷೆ ಪಡಯೋದರಿಂದ ಏನು ಲಾಭ ? ಒಂದು ವೇಳೆ ಅದನ್ನು ಪಡೆಯುತ್ತೇವೆ ಎಂದು ಯಾರಾದರೂ ಮುಂದೆ ಬಂದರೂ ಅವರು ನಿಜವಾಗಿಯೂ ಮಾಂಸ-ಮದ್ಯ ತ್ಯಜಿಸಿದ್ದಾರೆ ಎನ್ನುವುದನ್ನು ಇವರು ಹೇಗೆ ಅರಿಯುತ್ತಾರೆ ? ನಿಜವಾಗಿಯೂ ತ್ಯಜಿಸಿದ್ದರೂ, ದೀಕ್ಷೆ ಪಡೆದ ನಂತರ ಅವರು ಕುರುಬರಾಗಿಯೇ ಇರುತ್ತಾರಾ ? ಅಥವಾ ಬ್ರಾಹ್ಮಣರಾಗಿ ಹೋಗುತ್ತಾರಾ ? ಆಗಲಾದರೂ ಅವರಿಗೆ ಮಠದೊಳಗೆ ಪ್ರವೇಶ, ಸಹಪಂಕ್ತಿ ಭೋಜನ ಪ್ರಾಪ್ತಿಯಾಗುವುದೇ ? ಎಂಬ ವಿಷಯಗಳನ್ನೆಲ್ಲ ಪೇಜಾವರರು ವಿವರಿಸಿದ್ದರೆ ಚೆನ್ನಾಗಿತ್ತು.
ಸಿದ್ದಣ್ಣನ ಒಲಿಸಲು ಈ ತಂತ್ರ ?
ಪೇಜಾವರರ ತಂತ್ರ-ಕುತಂತ್ರಗಳನ್ನು ಬಲ್ಲವರಿಗೆ ಇವರ ದೀಕ್ಷೆ ಕಾರ್ಯಕ್ರಮದ ಹಿಂದೆ ನಾನಾ ಯೋಚನೆಗಳಿರುವುದು ಗೋಚರವಾಗುತ್ತಿವೆ. ಮೊದಲನೆಯದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಉಡುಪಿ ಮಠವನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳಲು ಯೋಚನೆ ಮಾಡಿದ್ದರು. ಆದರೆ ಅಧಿಕಾರಕ್ಕೇರಿದ ನಂತರ ಯಾಕೆ ಸುಮ್ಮನೆ ಉಸಾಬರಿ ಎಂದು ತೆಪ್ಪಗಾಗಿದ್ದಾರೆ. ಎಲ್ಲಿ ಮಠದ ಬುಡಕ್ಕೆ ಕೈ ಹಾಕಿ ಅಲುಗಾಡಿಸುತ್ತಾರೋ ಎಂದು ಬೆದರಿದ ಪೇಜಾವರ ಸೋನಿಯಾಗಾಂಧಿ ವರೆಗೂ ದೂರು ಕೊಂಡೊಯ್ದು ಸೋನಿಯಾರಿಂದ ಸಿದ್ದರಾಮಯ್ಯನವರಿಗೆ ಬುದ್ದಿ ಹೇಳಿಸಿದ್ದಾರೆ ಎಂಬ ಸುದ್ದಿಯೂ ಇದೆ. 
ಹೀಗೆ ಸಿದ್ದಣ್ಣ ಮಠದ ವಿಷಯದಲ್ಲಿ ತಣ್ಣಗಾಗುತ್ತಿರುವಂತೆಯೇ ಪೇಜಾವರರಿಗೆ ಖುಷಿ ತಾರಕಕ್ಕೇರಿ ಹೇಗಾದರೂ ಇದಕ್ಕೆ ಪ್ರತಿಯಾಗಿ ಸಿದ್ದಣ್ಣನವರನ್ನೂ ಖುಷಿ ಪಡಿಸುವ ಯೋಚನೆ ಬಂದಿದೆ. ಇದಕ್ಕೂ ಮತ್ತೊಂದು ಉಪ-ಕಾರಣವಿದ್ದು, ಅದೇನೆಂದರೆ ಯಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಮಠಗಳಿಗೆ ನೂರಾರು ಕೋಟಿ ದೇಣಿಗೆ ನೀಡಿ ರುಚಿ ಹತ್ತಿಸಿದ್ದರು. ಆದರೆ ನಂತರದ ಮುಖ್ಯಮಂತ್ರಿಗಳ್ಯಾರೂ ಅಷ್ಟೊಂದು ದುಡ್ಡು ಹಂಚಲು ಮುಂದಾಗಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿರುವಂತೆಯೇ ಮಠಗಳಿಗೆಲ್ಲಾ ಬರ ಬಡಿದಂತಾಯ್ತು. ಹೇಗಿದ್ದರೂ ಕಾಂಗ್ರೆಸ್ ಬಹುಮತ ಪಡೆದಿರುವುದರಿಂದ ಸಿದ್ದಣ್ಣ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಗಳು ಇವೆ. ಹೀಗಾಗಿ ಮಠಗಳ ಬಗ್ಗೆ ಮುನಿಸಿಕೊಂಡಿರುವ ಸಿದ್ದಣ್ಣನವರನ್ನು ಹೇಗಾದರೂ ಮಾಡಿ ಒಂಚೂರು ಒಲಿಸಿಕೊಳ್ಳಲು ಪೇಜಾವರರು ಈ ಬಣ್ಣದ ಮಾತುಗಳನ್ನಾಡಿರಲಿಕ್ಕೂ ಸಾಕು.
ಈ ಮಾತುಗಳಿಂದ ತನ್ನ ಕುಲಕ್ಕೆ ಆಪತ್ತಾಗುವುದನ್ನೂ ಪೇಜಾವರ ಸಹಿಸಲಾರರು. ಒಂದು ವೇಳೆ ತನ್ನ ಮಾತು ನಂಬಿ ಕುರುಬರು ಸಾವಿರಾರು ಸಂಖ್ಯೆಯಲ್ಲಿ ಬಂದುಬಿಟ್ಟರೆ ಗತಿ ಏನು? ಎಂದು ಯೋಚಿಸಿದ ಇವರು ಅದನ್ನು ಹೋಗಲಾಡಿಸಲು ಹಾಕಿದ ಶರತ್ತುಗಳೇ ಮದ್ಯ-ಮಾಂಸ ತ್ಯಜಿಸಬೇಕು ಎಂಬುದು. ಮದ್ಯ-ಮಾಂಸ ಕಲಿತ ಬ್ರಾಹ್ಮಣರೇ ಅದನ್ನು ಬಿಡಲು ಸಾಧ್ಯವಿಲ್ಲದಿರುವಾಗ ಹುಟ್ಟಿನಿಂದಲೇ ಬಂದ ಅಭ್ಯಾಸಗಳನ್ನು ಕುರುಬರು ಬಿಡುವುದಾದರೂ ಹೌದಾ ? ಅದು ಸಾಧ್ಯವಿಲ್ಲ ಎಂದು ತಿಳಿದಿರುವ ಪೇಜಾವರರಿಗೆ ಇದೂ ಸಾಧ್ಯವಿಲ್ಲದ್ದು ಎಂದು ಕೂಡಾ ತಿಳಿದಿದೆ. ಅಂದರೆ ಹಾವು ಸಾಯಬಾರದು, ಕೋಲು ಮುರಿಯಬಾರದು, ಆದರೆ ಹೊಡೆಯುವುದನ್ನೂ ನಿಲ್ಲಿಸಬಾರದು ಎಂಬುದು ಇದರ ಹಿಂದಿನ ಅರ್ಥ.
ಹಾಗೆಯೆ ವೈಷ್ಣವ ದೀಕ್ಷೆ ತೆಗೆದುಕೊಂಡರೆ ಮಾತ್ರ ಶ್ರೇಷ್ಟ ಎಂಬಂತಹ ಮೇಲು ಕೀಳು ಭಾವನೆಯನ್ನು ಬಿತ್ತುವ ಕೆಲಸಕ್ಕೂ ಪೇಜಾವರ ಕೈ ಹಾಕಿದ್ದಾರೆ. ಬ್ರಾಹ್ಮಣೇತರರು ಯಾವಾಗಲೂ ಕೀಳರಿಮೆಯಲ್ಲೇ ಇರಬೇಕು ಎಂಬ ದುರಾಲೋಚನೆ ಸಹ ಇದರಲ್ಲಿ ಅಡಗಿದೆ. ಇಂತಹ ಡೋಂಗಿ ದೀಕ್ಷೆಗಳಿಗೆ ಕುರುಬರು ಮಾತ್ರವಲ್ಲ, ಸ್ವತಃ ಬ್ರಾಹ್ಮಣರೂ ಬಲಿಯಾಗಬಾರದು.
ಇಷ್ಟು ದಿನ ದಲಿತರನ್ನು ಉದ್ದಾರ ಮಡುತ್ತೇನೆ ಎಂದು ಓಡಾಡಿಕೊಂಡಿದ್ದವರಿಗೆ ಇದ್ದಕ್ಕಿದ್ದಂತೆ ಕುರುಬರ ಮೇಲೆ ಪ್ರೀತಿ ಹುಟ್ಟಲು ಕಾರಣ ಗೌಪ್ಯವೇನಲ್ಲ. ಒಟ್ಟಿನಲ್ಲಿ ಪೇಜಾವರರು ಇಂತಹ ಗಿಮಿಕ್‌ಗಳನ್ನು ಬಿಟ್ಟರೆ ಸ್ವಲ್ಪವಾದರೂ ಮರ್ಯಾದೆ ಉಳಿದೀತು. ಇಲ್ಲದಿದ್ದರೆ ಇವರ ದಲಿತರ ಕೇರಿ ನಡಿಗೆ, ವೈಷ್ಣವ ದೀಕ್ಷೆಗಳಂತೆಯೇ ಇವರೂ ನಗೆಪಾಟಲಿನೆ ವಿಷಯವಾಗುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...