ವಿಷಯಕ್ಕೆ ಹೋಗಿ

ನಾವೆಲ್ಲಿ ಇವರೆಲ್ಲಿ ?


ನನಗೆ ತಿಳಿದ ಹುಡುಗಿಯೊಬ್ಬಳು ಹತ್ತನೇ ತರಗತಿ ಪರೀಕ್ಷೆ ಬರೆದವಳು ಕರೆ ಮಾಡಿದ್ದಳು. ತುಂಬಾ ಬೇಸರದಲ್ಲಿದ್ದ ಅವಳ ಧ್ವನಿಯಿಂದಲೇ ತಿಳಿಯಿತು, ಪರೀಕ್ಷೆ ಸುಖಕರವಾಗಿ ಆಗಿಲ್ಲ ಅಂತ. ವಿಚಾರಿಸಿದಾಗ "ಗಣಿತದಲ್ಲಿ ತುಂಬಾ ಕಡಿಮೆ ಅಂಕ ಬರಬಹುದು. ಕಷ್ಟ ಇತ್ತು. ಊಟ ಏನೂ ಸೇರ್ತಿಲ್ಲ, ಛೇ' ಎಂದು ಅಲವತ್ತುಕೊಂಡಳು.
ನಾನು ಸಮಾಧಾನ ಮಾಡುತ್ತಾ, "ಹೋದರೆ ಹೋಗಲಿ ಬಿಡು, ಅನುತ್ತೀರ್ಣ ಅಂತೂ ಆಗಲ್ಲ ತಾನೆ ? ಎಷ್ಟು ಅಂಕ ಬರಬಹುದು ?" ಎಂದು ಕೇಳಿದೆ.
ಅದಕ್ಕವಳು, "ನನ್ನ ಪ್ರಕಾರ ಬರೀ ಎಂಬತ್ತೈದು ಬಂದರೆ ಹೆಚ್ಚು!" ಅಂದಳು ತುಂಬಾ ಬೇಜಾರಿನಿಂದ.
ನಗಬೇಕೋ ಅಳಬೇಕೋ ತಿಳಿಯಲಿಲ್ಲ. ನಾವು ಓದುವಾಗ ಗಣಿತ ಹಾಗೂ ಇಂಗ್ಲೀಷಿನಲ್ಲಿ ಮೂವತ್ತೈದು ಬಂದರೆ ನಾವು ಈ ಲೋಕದಲ್ಲಿ ಇರುತ್ತಿರಲಿಲ್ಲ. 'ಅನುತ್ತೀರ್ಣ' ಅನ್ನುವ ಒಂದು ಘಟನೆಯನ್ನು ಉಳಿದು ಬೇರೇನೂ ನಮ್ಮನ್ನು ಕಾಡುತ್ತಿರಲಿಲ್ಲ. ಐವತ್ತರ ಆಜೂಬಾಜೂ ಅಂಕಗಳು ಬಂದರಂತೂ ನಮ್ಮ ಮೇಲೆ ನಮಗೇ ಅನುಮಾನ ಮೂಡುತ್ತಿತ್ತು! ಆದರೆ ಈಗಿನ ಮಕ್ಕಳಿಗೆ ಅದೇನಾಗಿದೆ ನೋಡಿ ? ಎಂಬತ್ತೈದು ಅಂಕ ಬರುವಂತಿದ್ದರೂ ಊಟ ಬಿಡುವ ಸ್ಥಿತಿಗೆ ತಲುಪುತ್ತಾರೆಂದರೆ... ತಪ್ಪು ಎಲ್ಲಿದೆಯೋ ಏನೋ...
ಯೋಚಿಸುತ್ತಾ ಇನೊಂದಿಷ್ಟು ಸಮಾಧಾನ ಹೇಳಿದೆ.
* * *
ಅಂದ ಹಾಗೆ ಫೇಸ್‌ಬುಕ್‌ನಲ್ಲಿ ‘ಮುದ್ದು ತೀರ್ಥಹಳ್ಳಿ‘ ಎಂಬ ಹುಡುಗಿ ಹಾಕಿರುವ ಪ್ರಕಟಣೆ ಎಲ್ಲಾ ವಿದ್ಯಾರ್ಥಿಗಳೂ ಅಳವಡಿಸಿಕೊಳ್ಳುವಂತಿದೆ... ಅದನ್ನೂ ನೋಡಿರಿ...

''ಅಂತೂ ಇಂತೂ ಎಸ್ಸೆಸ್ಸೆಲ್ಸಿ ಎಕ್ಸಾಂ ಮುಗಿಯಿತು....!
ನಾನು ಅಂಕಗಳ ಬೇಟೆಗೆ ಓಡುವವರ ವಿರೋಧಿ. ಹಾಗಾಗಿ ಯಾವುದೇ ಪರ್ಸೆಂಟೇಜ್ ಹೆಚ್ಚು ತಂದುಕೊಡುವ ರೆಸಿಡೆನ್ಷಿಯಲ್ ಶಾಲೆ ಸೇರದೇ ನಮ್ಮೂರಿನದೇ ಒಂದು ಸರಕಾರಿ ಶಾಲೆ ಸೇರಿ, ಹತ್ತನೇ ತರಗತಿಗೆ ಹೋಗಲಿರುವ ಮಕ್ಕಳೆಲ್ಲ ಸಮ್ಮರ್ ಕ್ಲಾಸಿಗೆ ಹೋಗುತ್ತಿರುವಾಗ ಕಾದಂಬರಿ ಬರೆಯುತ್ತ, ತುಂಗಾ ನದಿಯಲ್ಲಿ ಈಜುತ್ತಾ ಸಾಧ್ಯವಾದಷ್ಟು ಸಾಹಿತ್ಯ ಪುಸ್ತಕಗಳನ್ನು ಓದುತ್ತ ಕಳೆದಿದ್ದೆ. ಶಾಲೆ ಸೇರಿದ ಮೇಲೆ ಅಂದಂದಿನ ಪಾಠ ಅಂದಂದೇ ಓದಿದ್ದು ಬರೆದಿದ್ದು ಆಯಿತು. ದಸರಾ ರಜೆಯನ್ನೂ ಪರೀಕ್ಷಾ ತಯಾರಿಯಲ್ಲಿ ಎಲ್ಲ ಕಳೆಯುತ್ತಿದ್ದರೆ ನಾನು ಸಾಹಿತ್ಯ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ್ದೆ. ಅಷ್ಟು ಸಾಲದ್ದೆಂದು ಯಾವುದೇ ಟ್ಯೂಷನ್ನಿಗೂ ಹೋಗಲಿಲ್ಲ, ಯಾವುದೇ ಗೈಡು, ಝೆನ್, ಸೀಡಿಗಳು ಇತ್ಯಾದಿಗಳ ಮೊರೆ ಹೋಗಲಿಲ್ಲ. ಯಾವುದನ್ನೇ ಆಗಲಿ ಜ್ಞಾನಕ್ಕಾಗಿ ಓದಿದೆನೇ ಹೊರತು ಬಾಯಿಪಾಠ ಹಾಕಲಿಲ್ಲ ಯಾವ 'ಡರ್ಟಿ ಟ್ರಿಕ್ಸನ್ನು' ಬಳಸಲೂ ಇಲ್ಲ. ಆದರೆ ನನ್ನ ಶಿಕ್ಷಕಿ ಶ್ರೀಮತಿ ಸುಧೀಷ್ಣಾ ಕುಮಾರಿಯವರು ಒಂದು ಮಾತು ಹೇಳುತ್ತಿದ್ದರು, ಅದೇನೆಂದರೆ ನಿಮಗೆ ಹೆಚ್ಚು ಅಂಕ ತೆಗೆಯುವ ಸಾಮರ್ಥ್ಯ ಇರುವಾಗ ಅದಕ್ಕೆ ತಕ್ಕಂತೆ ನಿಮ್ಮ ಪ್ರಯತ್ನವಿರಬೇಕಲ್ಲವೇ ಎನ್ನುತ್ತಿದ್ದರು. ಈ ಮಾತನ್ನೂ ಇಟ್ಟುಕೊಂಡು, ಜ್ಞಾನ ಸಂಪಾದನೆಗಾಗಿ ಶೃದ್ಧೆಯಿಂದ ಓದಿ ಪರೀಕ್ಷೆಗೆ ತಾಯಾರಾಗಿದ್ದೆ. ಗಣಿತದ ಬಗ್ಗೆ ಸ್ವಲ್ಪ ಭಯವಿದ್ದೇ ಇತ್ತು ಎಂದಿನಂತೆ. ಉಳಿದ ಯಾವ ವಿಷಯಗಳ ಮೇಲೂ ಯಾವುದೇ ಅನುಮಾನವಿರಲಿಲ್ಲ. ಆದರೆ ಗಣಿತ ನಾನಂದುಕೊಂಡ ಹಾಗೆಯೇ ಸ್ವಲ್ಪ ಕಷ್ಟವಿತ್ತು. ವಿಜ್ಞಾನ ವಿಷಯದ ಮೇಲೆ ಚೆನ್ನಾಗಿ ಬರೆಯುವ ನಿರೀಕ್ಷೆಯಿತ್ತಾದರೂ ಪ್ರಶ್ನೆ ಪತ್ರಿಕೆ ನಾನಂದುಕೊಂಡಂತೆ ಇರಲಿಲ್ಲ. ಇವೆರಡೂ ವಿಷಯಗಳು ಸ್ವಲ್ಪ ಮಟ್ಟಿಗೆ ಕಷ್ಟವಿದ್ದದ್ದು ಬಿಟ್ಟರೆ ಉಳಿದ ನಾಲ್ಕೂ ಪ್ರಶ್ನೆಪತ್ರಿಕೆಗಳನ್ನು ಬಹಳ ಚೆನ್ನಾಗಿ ಮಾಡಿದ್ದೇನೆ. ಈ ನಡುವೆ ಕೆಲವರು rank ಪಟ್ಟಿಯಲ್ಲಿ ನಿನ್ನನ್ನು ನೋಡುತ್ತೇನೆ ಎಂದಿದ್ದರು. ತೀರ್ಥಹಳ್ಳಿಯ ಅಭಿಮಾನಿ ಗೆಳೆಯರು ಮುದ್ದು ನಮ್ಮ ತೀರ್ಥಹಳ್ಳಿಗೇ ಫಸ್ಟ್ ಬರುತ್ತಾಳೆ ಎಂದರಂತೆ. ಹಾಗೆ ಬಂದರೆ ಪಟಾಕಿ ಹಾರಿಸುತ್ತೇವೆ ಎಂದರಂತೆ. ನನಗನಿಸುತ್ತದೆ ಅತಿ ಹೆಚ್ಚು ಅಂಕ ಸಂಪಾಧಿಸುವುದು ಅಂಥ ಕಷ್ಟದ ಕೆಲಸವೇನೂ ಅಲ್ಲ. ಆದ್ರೆ ಎಲ್ಲ ಇದೇ ದಿಕ್ಕಿನಲ್ಲಿ ಓಡುವಾಗ ಅಂಕಗಳ ಬೇಟೆಗೆ ಓಡಬಾರದು, ಜ್ಞಾನಕ್ಕಾಗಿ ಓದಬೇಕು ಮುಂತಾದ ಗುರಿಗಳನ್ನಿಟ್ಟುಕೊಂಡು ಅವರ ವಿರುದ್ಧ ದಿಕ್ಕಿನಲ್ಲಿ ಓಡೋದು ಬಹಳ ಕಷ್ಟವಿದೆ. ಚಿಕ್ಕವಳಿದ್ದಾಗಿನಿಂದಲೂ ಎಲ್ಲ ಪ್ರಯೋಗಗಳನ್ನೂ ನನ್ನ ಮೇಲೆಯೇ ನಾನೇ ಪ್ರಯೋಗಿಸಿಕೊಳ್ಳುತ್ತಾ ಬಂದಿದ್ದೇನೆ. ಇನ್ನು ಮುಂದೆಯೂ ಅದನ್ನೇ ಮಾಡುತ್ತೇನೆ......''

ಈಕೆಯ ಪ್ರಜ್ಞತೆ ಎಲ್ಲಾ ವಿದ್ಯಾರ್ಥಿಗಳಿಗೂ ಬರಲಿ, ಅಂಕಗಳ ಹಿಂದೆ ಒಡುವುದನ್ನು ಬಿಟ್ಟು ಜ್ಞಾನದ ಹಿಂದೆ ಓಡುವಂತಾಗಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...