ವಿಷಯಕ್ಕೆ ಹೋಗಿ

ಓ ಮಳೆಯೇ...


ಸೋಗೆ ಮನೆಯ ಛಾವಣಿ ಸೀಳಿ
ಸೆಗಣಿ ಬಳಿದು ಅಮ್ಮ ನಡು ಬಗ್ಗಿಸಿ
ಗುಡಿಸಿ, ಸಾರಿಸಿ ನಯ ಮಾಡಿದ
ಒಡಕಲು ನೆಲಕೆ ಬಿದ್ದು ಪಟಪಟನೆ
ಸದ್ದು ಮಾಡಿ, ಬಡತನಕೆ ಬಣ್ಣ ಬಳಿದು ತೋರಿಸಿದ
ಓ ನಿರ್ದಯಿ ಮಳೆ ಹನಿಯೆ...
ನೀ ಎಂದಾದರೂ ಅರಿತೆಯಾ 
ಬಡವನ ಬವಣೆಯನ್ನು ?

ಯಾಕೆ ಅರಿಯಲಿಲ್ಲ ಮಗುವೆ
ನಿನ್ನಪ್ಪ ಅಮ್ಮ ಕಂಡೋರ ಹೊಲಗದ್ದೆಗಳಲಿ
ಹಸಿವ ಮರೆತು ಮಣ್ಣು, ಗೊಬ್ಬರ, ಕಲ್ಲು ಹೊತ್ತು
ದುಡಿದು ಬೆವರ ಸುರಿಸುವಾಗ
ಅವರ ಕಷ್ಟವರಿತು ಹನಿ ಸಿಂಚನ ಮಾಡಿ
ಧೋ ಎಂದು ಸುರಿದು ಅವರ ತಣಿಸಿ,
ಬೆವರ ತೊಳೆದು ತಣ್ಣಗಾಗಿಸಿದ್ದು
ನಾನಲ್ಲವೇ ಕಂದಾ ?

ಹೋಗು ಹೋಗೆಲೆ ಮಳೆಯೆ,
ಸಾವಿರ ಕವಿಗಳು ನಿನ್ನ ಹನಿ ಹನಿಯನೂ ಹೆಕ್ಕಿ
ಅದಕೆ ಸುಳ್ಳೇ ಸಂಭ್ರಮದ ಬಣ್ಣ ಬಳಿದು
ಹಾಡಿ ಹೊಗಳಿದ ಪರಿಗೆ ನೀ ಮೇಲೇರಿರುವೆ ಸೊಕ್ಕಿ
ಬಿಸಿಲ ಜಳಕೆ ಬಾಯಾರಿ ದುಡಿವ ದೇಹ
ಹನಿ ನೀರಿಗೆ ಪರಿತಪಿಸುವಾಗ
ನಿನಗೆ ಬರಲಿಲ್ಲ ಕರುಣೆ ಉಕ್ಕಿ.

ಅರಿತೆ ಮಗುವೆ ನಿನ್ನ ಅಂತರಂಗದ ಕೂಗು
ನನಗಿಲ್ಲ ಬರಿದೆ ಬಡಾಯಿಗಳ ಸೋಗು
ನನ್ನ ತಾಯಿ ಪ್ರಕೃತಿ ಮಾತೆ 
ಹಾಕಿದ ಗೆರೆಯ ದಾಟಿ ಬರಲಾರೆನೇಳು 
ಇದು ನನ್ನ ಸಂವೇದನೆಯ ಸೋಲು !

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...