ದೀಪಾವಳಿ ಮೊದಲಿಗೆ ಪಟಾಕಿ ಹೊಡೆವ ಹಬ್ಬ ಆಗಿರಲಿಲ್ಲ. ಇದು ಬಲಿ ಚಕ್ರವರ್ತಿಯನ್ನು ಸ್ಮರಿಸಿ ಆತನಿಗೆ ಪೂಜೆ ಸಲ್ಲಿಸುವ ದಿನ. ಸತ್ತ ಪುಣ್ಯಾತ್ಮರನ್ನು ಸ್ಮರಿಸಲು ಅವರ ಪ್ರತಿಕೃತಿಯ ಎದುರು ದೀಪ ಹಚ್ಚುವ ಪರಿಪಾಠ ಮೊದಲಿನಿಂದಲೂ ಇತ್ತು. ಅದೇ ರೀತಿ ಬಲಿ ಚಕ್ರವರ್ತಿಗೆ ದೀಪ ಹಚ್ಚಿ ಆತನನ್ನು ಸ್ಮರಿಸುವ ದಿನವೇ "ಬಲಿ ಪಾಡ್ಯಮಿ". ಇಂದಿಗೂ ಮಲೆನಾಡಿನ ಬಹಳಷ್ಟು ಮನೆಯಲ್ಲಿ (ನಮ್ಮನೆಯೂ ಸೇರಿ) ಬಲಿಪಾಡ್ಯಮಿಯ ದಿನ ಕೆರೆ, ಹೊಳೆ ಅಥವಾ ಬಾವಿಯಿಂದ ತಾಮ್ರದ ತಂಬಿಗೆಯಲ್ಲಿ ನೀರನ್ನು ತಂದು ಅದಕ್ಕೆ ಅಡಿಕೆ ಸಿಂಗಾರ ಅಥವಾ ಹೂಗಳನ್ನು ಮುಡಿಸಿ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಇದನ್ನು "ಬಲೀಂದ್ರ ಪೂಜೆ" ಅಥವಾ "ಬಲಿ ಪೂಜೆ" ಎಂದೇ ಕರೆಯುತ್ತಾರೆ. ನಮ್ಮ ಕಡೆ ಈಗಲೂ ಬಲಿಯನ್ನು ಹೊಗಳುವ ಜಾನಪದ ಹಾಡುಗಳು (ಹಬ್ಬಾಡುವ ಪದಗಳು ಎನ್ನುತ್ತಾರೆ) ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಂದು ಹಾಡು "ಎದ್ದೇಳು ಬಲಿವೀಂದರ, ನಿಜಕೊಂದ್ ಎಲ್ಲಾರ ಸಲುವಂತರಾ.." (ಎಲ್ಲರನ್ನೂ ಸಲಹುವ ಬಲೀಂದ್ರ ಎದ್ದೇಳು ) ಎಂದು ಪ್ರಾರಂಭವಾಗುತ್ತದೆ.
ಹಾಗೆಯೇ ಹಸು, ಎತ್ತುಗಳಿಗೆ ಹೂಗಳ ಹಾರ ಹಾಕಿ ಪೂಜೆ ಮಾಡುವುದೂ, ಅವುಗಳಿಗೆ ಇಷ್ಟದ ತಿನಿಸು ಮಾಡಿ ತಿನ್ನಿಸುವುದೂ ಇದೆ. (ಈ ಸಮಯಕ್ಕೆ ಅವುಗಳನ್ನು ಬಳಸಿಕೊಂಡು ದುಡಿವ ಬೇಸಾಯದ ಕೆಲಸ ಬಹುತೇಕ ಮುಗಿದಿರುತ್ತದಾದ್ದರಿಂದ ಅವುಗಳಿಗೆ ಈ ಅಕ್ಕರೆ).
ತೀರಾ ಇತ್ತೀಚಿನವರೆಗೂ ನಮ್ಮ ಕಡೆ ಈ ಹಬ್ಬಕ್ಕೆ ಪಟಾಕಿ ಹೊಡೆವ ಪರಿಪಾಠ ಇರಲಿಲ್ಲ. ಅದು ಇತ್ತೀಚಿನ ಬೆಳವಣಿಗೆ. "ದೀಪಾವಳಿ" ಹೆಸರು ಕೂಡಾ ಉತ್ತರದ ಕಡೆಯವರಿಂದ ಬಂದ ಹೆಸರು. ನಾವಿದನ್ನು "ದೊಡ್ಡ ಹಬ್ಬ" ಅಂತ ಕರೆದು ಕೊನೆಯಲ್ಲಿ "ವರ್ಷತೊಡಕು" ಆಚರಿಸಿ ಮರಿ ಹೊಡೆದು ದೊಡ್ಡದಾಗಿ ಆಚರಿಸುತ್ತೇವೆ.
ಕಾಮೆಂಟ್‌ಗಳು