ಒಬ್ಬ ವ್ಯಕ್ತಿ ಅಪರಾಧಿ ಎಂದು ತಿಳಿದ ನಂತರವೂ ಅವನ ಪರವಾಗಿ ನಿಂತು ನ್ಯಾಯವಾದಿಗಳು ನ್ಯಾಯಾಲಯದಲ್ಲಿ ವಾದಾಡುವುದು ತಪ್ಪಲ್ಲವೇ? ಇದೊಂದು ಸಂದೇಹ ಹಲವರನ್ನು ಕಾಡದಿರದು. ಒಬ್ಬ ವ್ಯಕ್ತಿ ವಕೀಲರೊಬ್ಬರ ಬಳಿ ಬಂದು `ತಾನೊಂದು ಕೊಲೆ ಮಾಡಿರುವುದಾಗಿ ತಿಳಸಿ ತನ್ನ ಪರವಾಗಿ ನ್ಯಾಯಾಲಯದಲ್ಲಿ ವಾದಾಡಬೇಕೆಂದು ಕೇಳಿದರೆ ಅವನು ಕೊಲೆ ಮಾಡಿರುವುದು ತಿಳಿದೂ ನ್ಯಾಯವಾದಿ ಅವನ ಪರ ವಹಿಸಬಹುದೇ? ಅದು ಎಷ್ಟರ ಮಟ್ಟಿಗೆ ಸರಿ? ಅದು `ನ್ಯಾಯ' ಹೇಗಾಗುತ್ತದೆ? ಅವರು ನ್ಯಾಯವಾದಿ ಹೇಗಾಗುತ್ತಾರೆ? ಎಂಬ ಪ್ರಶ್ನೆ ಪಾಮರರಾದ ನಮ್ಮನ್ನು ಕಾಡದಿರದು. ಇಂತಹ ಪ್ರಶ್ನೆಗೆ ಕೊಂಚ ಸಮಾಧಾನಕರ ಪರಿಹಾರ ನೀಡುವ ಪ್ರಯತ್ನ ಈ ಲೇಖನ.
ಇಲ್ಲಿ ನ್ಯಾಯವಾದಿಗಳ `ಕರ್ತವ್ಯ' ಮಾತ್ರ ಪ್ರಧಾನವಾಗುತ್ತದೆ. ಹಾಗೆಯೇ ಅವರು ನ್ಯಾಯವಾದಿಗಳಾಗಿದ್ದರೂ ಸಹ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಬಂದು `ನಾನೊಂದು ಕೊಲೆ ಮಾಡಿದ್ದೇನೆ. ನನ್ನ ಪರವಾಗಿ ವಾದ ಮಾಡಬೇಕು'. ಎಂದು ಕೇಳಿಕೊಂಡರೆ ನ್ಯಾಯವಾದಿ ಯಾವ ಕಾರಣಕ್ಕೂ ಅವನನ್ನು `ಅಪರಾಧಿ' ಎಂದು ಪರಿಗಣಿಸುವಂತಿಲ್ಲ. ಉದಾ: ಮುಂಬೈ ದಾಳಿಕೋರ ಕಸಬ್ ಪರವಾಗಿ ಸಹ ಒಬ್ಬರು ನ್ಯಾಯವಾದಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಅವನು ಅಪರಾಧಿ ಎಂದು ದೇಶಕ್ಕೆಲ್ಲಾ ತಿಳಿದಿದ್ದರೂ ಸಹ ಅವನ ಪರವಾಗಿ ಒಬ್ಬ ನ್ಯಾಯವಾದಿ ವಾದಿಸಲೇ ಬೇಕಾಗಿತ್ತು. ನಮ್ಮ ದೇಶದ ಕಾನೂನು ಇರುವುದೇ ಹಾಗೆ. ಏಕೆಂದರೆ ಅದನ್ನು ತೀರ್ಮಾನಿಸಬೇಕಾದುದು ನ್ಯಾಯಾಲಯವೇ ಹೊರತೂ ನ್ಯಾಯವಾದಿಯಲ್ಲ. ಭಾರತೀಯ ದಂಡ ಸಂಹಿತೆ ಪ್ರಕಾರ ಯಾರನ್ನೇ ಆಗಲಿ ಅಪರಾಧಿ ಎಂದು ಘೋಷಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆಯೇ ಹೊರತೂ ಇನ್ಯಾರಿಗೂ ಇಲ್ಲ.
`ಆರೋಪಿಯೊಬ್ಬ ಬಂದು `ತಾನೇ ಅಪರಾಧಿ' ಎಂದಾಗ್ಯೂ ಸಹ ನ್ಯಾಯವಾದಿ ಆತನನ್ನು `ಆರೋಪಿ' ಎಂದಷ್ಟೇ ಪರಿಗಣಿಸಬೇಕಾಗುತ್ತದೆ. ಹಾಗೆಯೇ ತನ್ನ ಬಳಿ ಬರುವ ವ್ಯಕ್ತಿ ನ್ಯಾಯವಾದಿಯ `ಕಕ್ಷೀದಾರ'ನೆನ್ನಿಸಿಕೊಳ್ಳುತ್ತಾನೆ. ಅಂದರೆ ಅವನ ಪರವಾಗಿ ನಿಂತು ವಾದ ಮಂಡಿಸಬೇಕಾದುದು ಆ ನ್ಯಾಯಾದಿಯ ಕರ್ತವ್ಯವಾಗುತ್ತದೆ. ಹಾಗೆಯೇ ಕಕ್ಷಿದಾರ ಹಾಗೂ ನ್ಯಾಯವಾದಿಯ ನಡುವೆ ನಡೆಯುವ ಸಂಭಾಷಣೆ privileged communication
(ರಹಸ್ಯ ಮಾತುಕತೆ) ಎನ್ನಲಾಗುತ್ತದೆ. ನ್ಯಾಯವಾದಿಯಲ್ಲಿ ಕಕ್ಷಿದಾರನು `ತಾನೇ ಕೊಲೆಗಾರ' ಎಂದು ಹೇಳಿದರೂ ಸಹ ನ್ಯಾಯವಾದಿ ಅದನ್ನು ಬಹಿರಂಗಪಡಿಸುವಂತಿಲ್ಲ. ಅಥವಾ ಕಕ್ಷಿದಾರ ಹೇಳಿದ ಯಾವುದೇ ವಿಷಯವನ್ನೂ ಸಹ ಅವನ ಅನುಮತಿಯಿಲ್ಲದೇ ಬೇರೆ ಯಾರಿಗೂ ತಿಳಿಸುವಂತಿಲ್ಲ. ಕಕ್ಷಿದಾರನ ವಿಷಯಗಳನ್ನು ರಹಸ್ಯವಾಗಿಡಬೇಕಾದುದು ನ್ಯಾಯವಾದಿಯ ಕರ್ತವ್ಯ.
ಆದರಿಲ್ಲೊಂದು ಸಂದೇಹವೇರ್ಪಡುತ್ತದೆ. ಒಬ್ಬ ಕೊಲೆಗಾರ ಘಟನೆ ನಡೆದ ನಂತರ ಅದನ್ನು ತನ್ನ ಮನೆಯವರಿಗೋ, ಗೆಳೆಯರಿಗೋ ಹೇಳಿಕೊಂಡಿದ್ದಲ್ಲಿ, ಆ ಘಟನೆಯ ತನಿಖೆ ನಡೆಸುವ ಪೋಲೀಸ್ ಅಧಿಕಾರಿ ಆ ವ್ಯಕ್ತಿಗಳನ್ನೇ ವಿಚಾರಣೆಗೆ ಒಳಪಡಿಸಬಹುದು. (ಕೆಲವು VIPಗಳನ್ನು ವಿಚಾರಣೆ ನಡೆಸಲು ಮೇಲ್ದರ್ಜೆಯ ಅಧಿಕಾರಿಗಳ, ಮುಖ್ಯಮಂತ್ರಿ / ಪ್ರಧಾನ ಮಂತ್ರಿಗಳ ಅನುಮತಿ ಅಗತ್ಯ) ಕೊಲೆಗಾರ ಹೇಳಿದನೆನ್ನಲಾದ ವಿಷಯವನ್ನು ತಿಳಿಸುವವರ ವಿಚಾರಣೆಯನ್ನು Extra judicial congession ಎನ್ನಲಾಗುತ್ತದೆ.
ಆದರೆ ಅದೇ ಕೊಲೆಗಾರ ಒಬ್ಬ ನ್ಯಾಯವಾದಿಯ ಬಳಿ ಬಂದು `ತಾನೊಒದು ಕೊಲೆ ಮಾಡಿ ಬಿಟ್ಟಿದ್ದೇನೆ' ಎಂದು ಬಹಿರಂಗ ಪಡಿಸಿದರೆ, ಆ ವ್ಯಕ್ತಿಯನ್ನು ನ್ಯಾಯವಾದಿ ನ್ಯಾಯಾಲಯದಲ್ಲಿ ಶರಣಾಗುವಂತೆ ಮಾಡಬಹುದು. ಅಥವಾ ಪೋಲೀಸರು ಬಂಧಿಸದಂತೆ ಜಾಮೀನು ಪಡೆಯಬಹುದು. ಅದೇನೇ ಮಾಡಿದರೂ ಆ ಕೊಲೆಯ ತನಿಖಾಧಿಕಾರಿ ನ್ಯಾಯವಾದಿಯ ಬಳಿ ಆರೋಪಿಯು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನಾ? ಎಂದು ಕೇಳುವಂತಿಲ್ಲ. ಅಥವಾ ಅದೇ ನ್ಯಾಯವಾದಿಯನ್ನು ಸಾಕ್ಷಿಯಾಗಿ ಪರಿಗಣಿಸುವಂತಿಲ್ಲ. ಅದಕ್ಕೆ ನ್ಯಾಯವಾದಿ ಉತ್ತರಿಸುವಂತೆಯೂ ಇಲ್ಲ. (ಭಾರತ ಸಾಕ್ಷಿ ಪ್ರಕಾರ ಸಂಹಿತೆ - 126 ) ಯಾವುದೇ ವಾದಗಳನ್ನಾಗಲಿ ಕೈಗೆತ್ತಿಕೊಂಡಾದ ನಂತರ ನ್ಯಾಯವಾದಿಗಳು ಯಾವುದೇ ಕಾರಣಕ್ಕೂ ತಮ್ಮನ್ನು ಹುಡುಕಿ ಬಂದಿರುವ ಕಕ್ಷಿದಾರನ ರಹಸ್ಯವನ್ನು ಕಾಪಾಡಬೇಕು. ಹಾಗೆಯೇ ಅವನು ನೀಡುವ ವಸ್ತುಗಳನ್ನು ಬಹಿರಂಗಪಡಿಸಬಾರದು ಎಂದು ಹೇಳಲಾಗಿದೆ.
ಹಾಗಾಗಿ ಕೊಲೆಗಾರನೊಬ್ಬ ಬಂದು ತಾನು ಕೊಲೆ ಮಾಡಲು ಬಳಸಿದ ವಸ್ತುವನ್ನು ನೀಡಿದರೂ ಸಹ ನ್ಯಾಯವಾದಿ ಅವನ ಪರವಾಗಿಯೇ ವಾದ ಮಾಡಬಹುದಾಗಿದೆ. ಇದು ಕೊಲೆ ನಡೆದ ನಂತರ ನ್ಯಾಯವಾದಿ ಕಾರ್ಯ ನಿರ್ವಹಿಸಬೇಕಾದ ಕರ್ತವ್ಯ ಮಾತ್ರ. ಬದಲಿಗೆ ಯಾರಾದರೊಬ್ಬ ಬಂದು `ನಾನೊಂದು ಕೊಲೆ ಮಾಡಬೇಕೆಂದಿದ್ದೇನೆ. ನಂತರ ನ್ಯಾಯಾಲಯದಲ್ಲಿ ಶಿಕ್ಷಗೊಳಗಾದಂತೆ ತಪ್ಪಿಸಿಕೊಳ್ಳಲು ನೀವೇ ನನ್ನ ಪರವಾಗಿ ವಾದ ಮಾಡಬೇಕು.' ಎಂದು ಕೇಳಿದರೆ, ಅದಕ್ಕೆ ನ್ಯಾಯವಾದಿ ಒಪ್ಪುವಂತಿಲ್ಲ. ಅದು ಅಪರಾಧಕ್ಕೆ ಕುಮ್ಮಕ್ಕು ನೀಡಿದ ಅಪರಾಧವಾಗುವುದರಿಂದ ನ್ಯಾಯವಾದಿಯನ್ನೇ ಶಿಕ್ಷೆಗೆ ಬಳಪಡಿಸ ಬಹುದಾಗಿದೆ.
ಹಾಗಾಗಿ `ಅಪರಾಧಿಯೆಂದು ತಿಳಿದ ನಂತರವೂ ಅವನ ಪರವಾಗಿ ವಾದ ಮಾಡಬಹುದೇ?' ಎಂಬ ಪ್ರಶ್ನೆಗೆ ಭಾರತ ನೀತಿ ಸಂಹಿತೆಯಲ್ಲಿ ಜಾಗವಿಲ್ಲ. ಹಾಗೆಯೇ ನ್ಯಾಯವಾದಿಗೆ `ಆರೋಪಿಯೊಬ್ಬ ಅವನೇ `ಅಪರಾಧಿಯೆಂದು ತಿಳಿದ ನಂತರವೂ ಅವನ ಪರವಾಗಿ ವಾದಾಡಬಾರದು' ಎಂಬುದಕ್ಕೆ ಯಾವುದೇ ತಡೆ ವಿಧಿಸಲಾಗಿಲ್ಲ. ಅಂದರೆ ಅರೋಪಿಯೊಬ್ಬನ ಪರವಾಗಿ ಯಾವುದೇ ನ್ಯಾಯವಾದಿ ನ್ಯಾಯಾಲಯದಲ್ಲಿ ವಾದಾಡಬಹುದು. ಯಾವ ಸಮಯದಲ್ಲೂ ಸಹ ಅವನ ಹಿತಾಸಕ್ತಿಗೆ ಭಂಗ ತರಬಾರದು. ಎಂದು ಸೂಚಿಸಲಾಗಿದೆ.
Bar Council of India ದಲ್ಲಿ ನ್ಯಾಯವಾದಿಗಳಿಗಿರುವ ವಿಧಿಗಳಲ್ಲಿ - ನ್ಯಾಯವಾದಿಗಳು ತಮ್ಮ ಕಕ್ಷಿದಾರರಲ್ಲಿನ ಕರ್ತವ್ಯದ ಬಗ್ಗೆ ಹೇಳುತ್ತಾ...
`ನ್ಯಾಯವಾದಿಯು ತನ್ನ ಕಕ್ಷಿದಾರರು ಅಪರಾಧಿಯೆಂದು ತಿಳಿದರೂ ಸಹ ಅದು ಸಾಕ್ಷ್ಯ ಸಮೇತ ನಿರೂಪಿಸಲ್ಪಡದ ಹೊರತೂ ಒಬ್ಬ ವ್ಯಕ್ತಿಯೂ ಸಹ ದಂಡನೆಗೊಳಗಾಗಬಾರದು.' ಎಂಬ ನೀತಿ ಸಂಹಿತೆಯನ್ವಯ ಆ ವ್ಯಕ್ತಿಯ ಪರವಾಗಿ ವಾದಾಡಬಹುದು ಎಂದಿದೆ.
`ಕಾನೂನು ಒಂದು ಕತ್ತಲ ಕೋಣೆಯಿದ್ದಂತೆ. ಅಲ್ಲಿ ನ್ಯಾಯವಾದಿಗಳ ವಾದವೇ ಬೆಳಕು.' ಎಂದಿದ್ದಾರೆ ಹಿರಿಯ ನ್ಯಾಯವಾದಿ ಒಬ್ಬರು. ಏಕೆಂದರೆ `ಆರೋಪಿ ಹಾಗೂ ಅಪರಾದಿಗಳ ನಡುವೆ ಅಂತರ ಬಹಳಷ್ಟಿದೆ. ಆದ್ದರಿಂದಲೇ `ತನಿಖೆ ಅಥವಾ ವಿಚಾರಣೆಯನ್ನು Hear both sides ಎಂದು ಹೇಳುತ್ತಾರೆ. ವಿಚಾರಣೆ ಇಲ್ಲದೇ ನೀಡಲ್ಪಡುವ ದಂಡನೆಗಳಿಗೆ ಮರ್ಯಾದೆಯಿಲ್ಲ. ಅದು ತಾಲೀಬಾನಿ ಶೈಲಿಯಾಗಿಬಿಡುತ್ತದೆ. `ಹತ್ತು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿ ದಂಡನೆಗೊಳಗಾಗಬಾರದು.' ಎಂಬುದು ನಮ್ಮ ಕಾನೂನಿನ ನೀತಿ.
ಯಾರಿಗಾದರೂ ತನ್ನ ಪರವಾಗಿ ವಾದಾಡಲು ನ್ಯಾಯವಾದಿಯನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ ಅವನ ಪರವಾಗಿ ವಾದಾಡಲು ಸರ್ಕಾರವೇ ಒಬ್ಬ ನ್ಯಾಯವಾದಿಯನ್ನು ನೇಮಿಸಬೇಕಾಗುತ್ತದೆ. ಆದ್ದರಿಂದ ಎರಡು ವ್ಯಕ್ತಿಗಳ ನಡುವಿನ ವಾದಕ್ಕೆ (ಇದರಲ್ಲಿ ಒಂದು ವ್ಯಕ್ತಿ ಸರ್ಕಾರವೇ ಇರಬಹುದು) ಇಬ್ಬರು ನ್ಯಾಯವಾದಿಗಳು ಇರಲೇಬೇಕು. ತನ್ನ ಪರವಾಗಿ ವಾದ ಮಂಡಿಸಲು ತಾನೇ ಶಕ್ತ ಅನ್ನಿಸಿದ ಸಂದರ್ಭದಲ್ಲಿ ಆರೋಪಿ ಅಥವಾ ದೂರುದಾರನು ತಾನೇ ತನ್ನ ವಾದವನ್ನು ಮಂಡಿಸಬಹುದಾಗಿದೆ. ಆದರೆ ಇದಕ್ಕೆ ನ್ಯಾಯಾಧೀಶರ ಅನುಮತಿ ಬೇಕಾಗುತ್ತದೆ.
ಅಪರಾಧಿಗಳ ಪರವಾಗಿ ವಾದಾಡುವ ನ್ಯಾಯವಾದಿಗಳು ಅವರ ಅಪರಾಧವನ್ನು ಮುಚ್ಚಿ ಹಾಕಲು ಯತ್ನಿಸುತ್ತಾರೆ ಎನ್ನುವವರಿದ್ದಾರೆ. ಈ ವಾದದಲ್ಲಿ ಹುರುಳಿಲ್ಲದಿಲ್ಲ. ಇಂದು ಎಲ್ಲಾ ರಂಗಗಳಲ್ಲೂ ಇರುವಂತೆಯೇ ಈ ನ್ಯಾಯಾಂಗದಲ್ಲೂ ಅನೇಕ ಕೊರತೆಗಳು, ಅನ್ಯಾಯಗಳು, ಆಮಿಷಗಳು ತುಂಬಿ ಹೋಗಿವೆ. ಧನಿಕ ಅಪರಾಧಿಯ ಆಮಿಷಕ್ಕೆ ಒಳಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನಿಸಿಕೊಂಡ ಸರ್ಕಾರಿ ನ್ಯಾಯವಾದಿಗಳು ಪ್ರಕರನವನ್ನು ದುರ್ಭಲಗೊಳಿಸಿ ಅಪರಾಧಿಯನ್ನು ಕೇವಲ ಆರೋಪಿಯನ್ನಾಗಿ ಬದಲಾಯಿಸಿ ಶಿಕ್ಷೆಯಾಗದಂತೆ ತಡೆಯುವುದೂ ಇದೆ. ಹಾಗಂತ ಎಲ್ಲಾ ನ್ಯಾಯವಾದಿಗಳು ಹೀಗೆಯೇ ಮಾಡುತ್ತಾರೆ ಎಂದೇನಲ್ಲ. ಇಲ್ಲೂ ನಿಜವಾದ ವೃತ್ತಿ ಪ್ರಾಮಾಣಿಕರಿದ್ದಾರೆ. ಪ್ರಾಮಾಣಿಕ ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬ ಮುಂದೆ ತಾನೇ ನ್ಯಾಯಾಧೀಶನಾಗುವ ಅವಕಾಶ ಇರುತ್ತದೆ. ಆದರೆ ನ್ಯಾಯವಾದಿಯಾಗಿರುವಾಗಲೇ ತನ್ನ ಕೈಗೆ ಕಪ್ಪು ಮಸಿ ಬಳಿದುಕೊಂಡರೆ ಮುಂದೆ ತೊಂದರೆಯಾಗುತ್ತದೆ. ಆದ್ದರಿಂದ ಅವರವರ ವೃತ್ತಿಗನುಗುಣವಾಗಿ ನಡೆದುಕೊಳ್ಳುವುದೇ ಸರಿ. ಅದು ಅವರ ವೃತ್ತಿ ಧರ್ಮ.
ಕಾಮೆಂಟ್‌ಗಳು